ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ಆರೆಸ್ಸೆಸ್ ಷಡ್ಯಂತ್ರವಲ್ಲ, ಕ್ಷಮಿಸಿ: ಅಜೀಜ್ (RSS | Aziz Burney | RSS Ka Shadyantra | Mumbai attacks)
ಅಜೀಜ್ ಬ್ರೂನಿ ಕ್ಷಮೆ ಯಾಚನೆ ಬರಹ..
PR
2008ರ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ದಾಳಿಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೈವಾಡವಿದೆ ಎಂದು ಪುಸ್ತಕವೊಂದನ್ನು ಬರೆದಿದ್ದ ಉರ್ದು ದಿನಪತ್ರಿಕೆಯೊಂದರ ಸಂಪಾದಕ ಅಜೀಜ್ ಬ್ರೂನಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಆರೆಸ್ಸೆಸ್, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಜೀಜ್ ಬ್ರೂನಿಯವರು ಸಂಪಾದಕತ್ವದಲ್ಲಿ ಬಂದಿದ್ದ '26/11, ಆರೆಸ್ಸೆಸ್ ಕಾ ಷಡ್ಯಂತ್ರ' (ಮುಂಬೈ ದಾಳಿ ಆರೆಸ್ಸೆಸ್ ಷಡ್ಯಂತ್ರ) ಎಂಬ ಪ್ರಚೋದನಾಕಾರಿ ಶೀರ್ಷಿಕೆಯನ್ನೊಳಗೊಂಡ ಪುಸ್ತಕವನ್ನು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು 2010ರ ಡಿಸೆಂಬರ್ 6ರಂದು ಬಿಡುಗಡೆ ಮಾಡಿದ್ದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ವಿರುದ್ಧ ಬ್ರೂನಿ ಮತ್ತು ದಿಗ್ವಿಜಯ್ ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದರು. ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆಯವರು ಸಾಯುವ ಕೆಲವೇ ಗಂಟೆಗಳ ಮೊದಲು ತನಗೆ ಕರೆ ಮಾಡಿ, ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆ ಇದೆ ಎಂದು ಮಾಹಿತಿ ನೀಡಿದ್ದರು ಎಂದು ದಿಗ್ವಿಜಯ್ ಹೇಳಿಕೊಂಡಿದ್ದರು.

ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಆರೆಸ್ಸೆಸ್, ಅಜೀಜ್ ಬ್ರೂನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಇಷ್ಟಕ್ಕೆ ಮೆತ್ತಗಾದ ಲೇಖಕ, ತನ್ನದೇ ಪತ್ರಿಕೆಯ ಮುಖಪುಟದಲ್ಲಿ ಕ್ಷಮೆ ಯಾಚಿಸಿದ್ದಾರೆ.

ರಾಷ್ಟ್ರೀಯ ಸಹರಾ ಪತ್ರಿಕೆಯ ಹಿಂದಿ ಮತ್ತು ಉರ್ದು ಆವೃತ್ತಿಗಳಲ್ಲಿ ಜನವರಿ 28ರಂದು ಅವರು ಈ ವಿಷಾದದ ಬರಹವನ್ನು ಪ್ರಕಟಿಸಿದ್ದಾರೆ. 'ಅಜೀಜ್ ಬ್ರೂನಿ ಕೀ ತರಫ್ ಸೇ ಸಫಾಯಿ ಔರ್ ಮಾಫಿ' (ಅಜೀಜ್ ಬ್ರೂನಿ ಅವರಿಂದ ಕ್ಷಮೆ ಯಾಚನೆ ಮತ್ತು ಸ್ಪಷ್ಟನೆ) ಎಂಬ ಶೀರ್ಷಿಕೆಯಲ್ಲಿ ಕ್ಷಮೆ ಯಾಚಿಸಲಾಗಿದೆ.
ಪುಸ್ತಕ ಬಿಡುಗಡೆ ಮಾಡುತ್ತಿರುವ ದಿಗ್ವಿಜಯ್ ಸಿಂಗ್
PR

ಮುಂಬೈ ದಾಳಿ ನಡೆದ ನಂತರ ಸತತ ಎರಡು ವರ್ಷಗಳ ಕಾಲ, ಆ ದಾಳಿಯನ್ನು 'ಇನ್ನೊಂದು' ದೃಷ್ಟಿಯಿಂದ ನೋಡಿ ಲೇಖನಗಳನ್ನು ಬರೆದಿದ್ದರು. ಸುಮಾರು 100ಕ್ಕೂ ಹೆಚ್ಚು ಲೇಖನಗಳು ಅವರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅವೆಲ್ಲವನ್ನೂ ಒಟ್ಟು ಸೇರಿಸಿ ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಗಿತ್ತು.

ಕ್ಷಮಿಸಲು ನಾವು ಸಿದ್ಧರಿಲ್ಲ: ಆರೆಸ್ಸೆಸ್
ಅಜೀಜ್ ಬ್ರೂನಿಯವರು ಬೇಷರತ್ ಕ್ಷಮೆ ಯಾಚಿಸಿರುವುದನ್ನು ತಿರಸ್ಕರಿಸಿರುವ ಆರೆಸ್ಸೆಸ್, ನವಿ ಮುಂಬೈ ನ್ಯಾಯಾಲಯದಲ್ಲಿ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಇದರಿಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಬ್ರೂನಿ ಅವರ ಬರಹಗಳು ಸಂಘಟನೆ ಮೇಲೆ ಗಂಭೀರ ಆಪಾದನೆಗಳನ್ನು ಮಾಡಿವೆ. ಅವು ದೇಶದ್ರೋಹಕ್ಕೆ ಸಮಾನವಾದುವು. ಹಾಗಾಗಿ ಅವರ ಕ್ಷಮೆಯಾಚನೆಯನ್ನು ನಾವು ಸ್ವೀಕರಿಸುವುದಿಲ್ಲ ಮತ್ತು ಪ್ರಕರಣವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಆರೆಸ್ಸೆಸ್ ನಾಯಕ ರಾಮ್ ಮಾಧವ್ ತಿಳಿಸಿದ್ದಾರೆ.

ದಿಗ್ವಿಜಯ್‌ಗೂ ನೋಟೀಸ್...
ಆರೆಸ್ಸೆಸ್ ಮೂಲಗಳ ಪ್ರಕಾರ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೂ ಲೀಗಲ್ ನೋಟೀಸ್ ನೀಡಲಾಗುತ್ತದೆ. ಅಜೀಜ್ ಬ್ರೂನಿಯವರು ನಡೆಸಿದ ಅಪಪ್ರಚಾರದಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ದಿಗ್ವಿಜಯ್ ಅವರಿಗೆ ತನ್ನ ವಕೀಲರ ಮೂಲಕ ಪ್ರಕರಣ ದಾಖಲಿಸಿರುವ ವಿನಯ್ ಜೋಷಿಯವರು ನೋಟೀಸ್ ಕಳುಹಿಸಲಿದ್ದಾರೆ.

ಮುಂಬೈ ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ವಿವಿಧ ವೇದಿಕೆಗಳಲ್ಲಿ ಮತ್ತು ಮಾಧ್ಯಮಗಳಿಗೆ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಗಳು ಮತ್ತು ಬ್ರೂನಿಯವರ ಜತೆ ಸೇರಿ ಅಪಪ್ರಚಾರದಲ್ಲಿ ಪಾಲ್ಗೊಂಡಿರುವುದನ್ನು ಪ್ರಕರಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಅರ್ಜಿದಾರ ವಿನಯ್ ಜೋಷಿ ಹೇಳಿದ್ದಾರೆಂದು ವರದಿಗಳು ಹೇಳಿವೆ.
ಸಂಬಂಧಿತ ಲೇಖನಗಳು