ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈಜಿಪ್ಟ್‌ನಿಂದ ಬರಲು ದುಪ್ಪಟ್ಟು ದರ ವಿಧಿಸಿದ ಏರ್ ಇಂಡಿಯಾ (Egypt | exorbitant AI fares | Air India | Hosni Mubarak)
PTI
PTI
ಈಜಿಪ್ಟ್‌‌ನಲ್ಲಿ ಕ್ಷೋಭೆಯಿಂದ ಕಂಗಾಲಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ನಿಯೋಜಿಸಲಾಗಿದ್ದ ಏರ್ ಇಂಡಿಯಾ, ಕೈರೋದಿಂದ ಮುಂಬಯಿಗೆ ಬರಲು ದುಪ್ಪಟ್ಟಿಗಿಂತಲೂ ಹೆಚ್ಚು ದರ ವಿಧಿಸಿ ಸುಲಿಗೆ ಮಾಡುತ್ತಿವೆ ಎಂದು ನೊಂದವರು ಆರೋಪಿಸಿದ್ದಾರೆ.

ಸಾಮಾನ್ಯವಾಗಿ 20 ಸಾವಿರ ರೂಪಾಯಿ ದರವಿರುವ ಈ ಪ್ರಯಾಣದ ಪ್ರತಿ ಟಿಕೇಟಿಗೆ ಏರ್ ಇಂಡಿಯಾ 43 ಸಾವಿರ ರೂಪಾಯಿ ವಸೂಲಿ ಮಾಡಿದೆ ಎಂದು ಈ ಪ್ರಯಾಣಿಕರು ದೂರಿಕೊಂಡಿದ್ದಾರೆ. ಹಿಂಸಾಚಾರತಪ್ತ ಈಜಿಪ್ಟ್‌ನಿಂದ ಭಾರತೀಯರನ್ನು ಕರೆತರಲು ಎರಡು ಏರ್ ಇಂಡಿಯಾ ವಿಶೇಷ ವಿಮಾನಗಳನ್ನು ಸರಕಾರವು ವ್ಯವಸ್ಥೆ ಮಾಡಿತ್ತು.

ಪ್ರತೀ ಟಿಕೇಟಿಗೆ 980 ಡಾಲರ್ (43,000 ರೂ.) ನ್ನು ಏರ್ ಇಂಡಿಯಾ ವಿಧಿಸಿತ್ತು. ನಮ್ಮನ್ನು ಅಲ್ಲಿಂದ ರಕ್ಷಿಸಿ ಒಳ್ಳೆಯ ಕೆಲಸ ಮಾಡಿದ್ದಾರೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕೈರೋದಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ನಮ್ಮನ್ನು ಪಾರು ಮಾಡಿದ್ದಾರೆ. ಆದರೆ ಅಂತಹ ಸ್ಥಿತಿಯಲ್ಲಿ ಈ ರೀತಿಯ ದುಬಾರಿ ದರ ವಿಧಿಸುವುದು ನ್ಯಾಯವಲ್ಲ ಎಂದು ಮಂಗಳವಾರ ಮುಂಜಾನೆ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದ ಏರ್‌ಲೈನ್ಸ್ ಸಿಬ್ಬಂದಿ, ಟಿಕೆಟ್ ಕಾಯ್ದಿರಿಸಲು ನಗದು ಹಣವನ್ನೇ ನೀಡಬೇಕೆಂದು ಪಟ್ಟು ಹಿಡಿದಿರುವುದಾಗಿಯೂ ಕೆಲವು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ನಗದು ರೂಪದಲ್ಲಿ ಹಣ ಕೊಟ್ಟವರಿಗೆ ಮಾತ್ರವೇ ಅವರು ಅವಕಾಶ ಕೊಟ್ಟರು ಡೆಬಿಟ್‌ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‌ಗಳಲ್ಲಿ ಪಾವತಿಸಲು ಸುತಾರಾಂ ಒಪ್ಪಲಿಲ್ಲ. ಈ ಕಾರಣದಿಂದ ಸಾಕಷ್ಟು ವಿದ್ಯಾರ್ಥಿಗಳು ಹಣ ಒದಗಿಸಲಾಗದೆ ಇನ್ನೂ ಕೈರೋದಲ್ಲೇ ಉಳಿಯುವಂತಾಗಿದೆ ಎಂದರು ಮತ್ತೊಬ್ಬರು ಪ್ರಯಾಣಿಕರು.

ಆದರೆ, ಇದನ್ನೆಲ್ಲ ಅಲ್ಲಗಳೆದಿರುವ ಏರ್ ಇಂಡಿಯಾ, ಪ್ರಯಾಣಿಕರ ಮೇಲೆ ಅಧಿಕ ದರ ವಿಧಿಸಿಲ್ಲ, ಇದು ಸಾಮಾನ್ಯವಾದ ರಿಟರ್ನ್ ಟಿಕೆಟ್ ದರವಾಗಿದೆ ಎಂದು ಸಮರ್ಥಿಸಿಕೊಂಡಿದೆ.

ದೈನಂದಿನ ಸೇವಾನಿರತ ವಿಮಾನವನ್ನು ತಡೆಹಿಡಿದು, ಸಂಕಷ್ಟದಲ್ಲಿದ್ದ ಇವರನ್ನು ಕರೆತರಲು ಖಾಲಿ ವಿಮಾನವನ್ನು ಮುಂಬಯಿಯಿಂದ ಕಳುಹಿಸಲಾಯಿತು ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಒನ್-ವೇ ಪ್ರಯಾಣಕ್ಕೆ ಕನಿಷ್ಠ ದರ ಸುಮಾರು 20 ಸಾವಿರ ಎಂದಿದ್ದಾರೆ ಟ್ರಾವೆಲ್ ಏಜೆಂಟ್ ಒಬ್ಬರು.

ಇದೇ ವೇಳೆ, ಈಜಿಪ್ಟ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಸುಮಾರು 219 ಪ್ರಯಾಣಿಕರನ್ನು ಹೊತ್ತ ಏರ್ಇಂಡಿಯಾ ವಿಮಾನ, ಮುಂಜಾನೆ 6 ಗಂಟೆಗೆ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಪದಚ್ಯುತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಸಂಘರ್ಷಮಯ ಪರಿಸ್ಥಿತಿಯಿಂದ ಸೋಮವಾರವೂ ಸುಮಾರು 300 ಭಾರತೀಯರು ತಾಯ್ನಾಡಿಗೆ ಬಂದಿದ್ದರು.

ಸೋಮವಾರ ಅಪರಾಹ್ನ ಬೋಯಿಂಗ್ 747-800 ರಲ್ಲಿ ವಾಪಸಾದ ಮೊದಲ ತಂಡದಲ್ಲಿದ್ದ ಹೆಚ್ಚಿನವರು ಟಾಟಾ ಸ್ಟೀಲ್ ಕೈರೋದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನಕ್ಕೆ ಹೋಗಿದ್ದವರು.

ಇದುವರೆಗೆ ಪ್ರವಾಸಿಗರು ಸೇರಿದಂತೆ ಸುಮಾರು 550 ಭಾರತೀಯರು ಈಜಿಪ್ಟ್‌ನಿಂದ ಬಂದಿಳಿದಿದ್ದಾರೆ.
ಸಂಬಂಧಿತ ಲೇಖನಗಳು