ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; 'ಸ್ಪೆಕ್ಟ್ರಮ್' ರಾಜಾ ಕೊನೆಗೂ ಬಂಧನ (A Raja | 2G scam | UPA govt | CBI)
1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿರುವ ಡಿಎಂಕೆ ಸಂಸದ ಹಾಗೂ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಬಿಐ ಬಂಧಿಸಿದೆ.

ರಾಜಾ ಅವರ ಸಹೋದರ ಕೆ. ಪೆರುಮಾಳ್, ಅವರ ಆಪ್ತ ಸಹಾಯಕರಾದ - ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ ಮತ್ತು ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರಿಯಾ ಅವರನ್ನು ಕೂಡ ಸಿಬಿಐ ಬಂಧಿಸಿದೆ. ಬಂಧಿತರನ್ನು 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ.
PTI

2ಜಿ ಹಗರಣ ಹೊರಗೆ ಬಿದ್ದ ಬರೋಬ್ಬರಿ ಮೂರು ತಿಂಗಳ ನಂತರ ಅವರನ್ನು ಬಂಧಿಸಲಾಗಿದೆ. ಹಲವು ಬಾರಿ ಅವರನ್ನು ವಿಚಾರಣೆಗೊಳಪಡಿಸಿದ ನಂತರ ಇದೀಗ ಕಾನೂನು ಕ್ರಮಕ್ಕೆ ಕೇಂದ್ರೀಯ ತನಿಖಾ ದಳವು ಮುಂದಾಗಿದೆ.

2007ರ ಅಕ್ಟೋಬರ್ ತಿಂಗಳಿಂದ 2008ರ ನಡುವೆ 2ಜಿ ತರಂಗಾಂತರಗಳನ್ನು ಹರಾಜು ನಡೆಸದೆ, ಕೆಲವು ಕಂಪನಿಗಳ ಪರವಾಗಿ ಲಂಚ ತೆಗೆದುಕೊಂಡು ಹಂಚಿಕೆ ಮಾಡಿದ್ದರಿಂದ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ನೀಡಿತ್ತು. ಇದರ ಬಳಿಕ ದೂರಸಂಪರ್ಕ ಖಾತೆಗೆ ಅವರು ರಾಜೀನಾಮೆ ನೀಡಿದ್ದರು.

ನಾಲ್ಕನೇ ಬಾರಿ ವಿಚಾರಣೆ...
ಹಗರಣ ಸಂಬಂಧ ರಾಜಾ ಅವರನ್ನು ಮೊತ್ತ ಮೊದಲ ಬಾರಿ ಸಿಬಿಐ ವಿಚಾರಣೆ ನಡೆಸಿದ್ದು ಡಿಸೆಂಬರ್ 24ರಂದು. ಮರುದಿನ ಡಿ.25ರಂದು ಕೂಡ ವಿಚಾರಣೆ ಮಾಡಲಾಗಿತ್ತು. ಜನವರಿ 31ರಂದು ಮತ್ತು ಫೆಬ್ರವರಿ 1ರಂದು ಮತ್ತೆ ವಿಚಾರಣೆ ನಡೆಸಲಾಗಿತ್ತು.

ಕಂಪನಿಗಳ ಜತೆ ಹೊಂದಿರುವ ಸಂಬಂಧ, ಲಾಬಿಗಾರ್ತಿ ನೀರಾ ರಾಡಿಯಾ ಮತ್ತಿತರರ ಜತೆಗಿನ ವ್ಯವಹಾರಗಳ ಕುರಿತು ಸಿಬಿಐ ಮಾಜಿ ಸಚಿವರನ್ನು ತೀವ್ರ ವಿಚಾರಣೆಗೊಳಪಡಿಸಿತ್ತು.

ವರದಿ ಬಂದು ಎರಡು ದಿನಗಳಾಗಿಲ್ಲ...
2ಜಿ ಹಗರಣ ಕುರಿತು ಸರಕಾರ ನೇಮಿಸಿದ್ದ ಏಕವ್ಯಕ್ತಿ ಆಯೋಗದ ವರದಿ ಬಂದು ಎರಡು ದಿನಗಳಷ್ಟೇ ಆಗಿದೆ. ಅಷ್ಟರಲ್ಲೇ ರಾಜಾ ಅವರನ್ನು ಬಂಧಿಸಲಾಗಿದೆ.

ಇದೇ ವಾರದ ಆರಂಭದಲ್ಲಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ತಾನು ಸಿದ್ಧಪಡಿಸಿದ್ದ ವರದಿಯನ್ನು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಿಗೆ ಸಲ್ಲಿಸಿದ್ದರು. ಈ ವರದಿಯಲ್ಲಿ ದೂರಸಂಪರ್ಕ ಇಲಾಖೆಯ ಹಲವು ಅಧಿಕಾರಿಗಳು ಮತ್ತು ರಾಜಾ ಅವರೇ ತಪ್ಪಿತಸ್ಥರು ಎಂದು ಬೆಟ್ಟು ಮಾಡಲಾಗಿತ್ತು ಎಂದು ವರದಿಗಳು ಹೇಳಿದ್ದವು.

ಎರಡನೇ ಬಾರಿ ಸಚಿವರಾಗಿದ್ದರು...
2007ರ ಮೇ 18ರಂದು ದೂರಸಂಪರ್ಕ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜಾ, 15ನೇ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದರು. 2009ರ ಮೇ 31ರಂದು ಮತ್ತೆ ಸಚಿವರಾಗಿದ್ದ ಅವರು 2010ರ ನವೆಂಬರ್ 14ರವರೆಗೆ ಸಚಿವರಾಗಿ ಮುಂದುವರಿದಿದ್ದರು.

ಸಿಎಜಿ ವರದಿ ಬಹಿರಂಗವಾದ ನಂತರ ತೀವ್ರ ಒತ್ತಡ ಎದುರಿಸಿದ ರಾಜಾ ಕೊನೆಗೂ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದರು. ಆದರೆ ಯಾವುದೇ ಹಂತದಲ್ಲೂ, ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿರಲಿಲ್ಲ. ಬದಲಿಗೆ, ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ನಾನು ಹಿಂದಿನ ಸರಕಾರದ ನಿಯಮಾವಳಿಗಳನ್ನು ಪಾಲಿಸಿದ್ದೇನೆ, ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದರು.

ಪ್ರಧಾನಿಯನ್ನೇ ಲೆಕ್ಕಿಸಿರಲಿಲ್ಲ...
ಮೊದಲು ಬಂದವರಿಗೆ ಆದ್ಯತೆ ಎಂಬ ಲೆಕ್ಕಾಚಾರದಲ್ಲಿ ತರಂಗಾಂತರಗಳನ್ನು ಹಂಚಿಕೆ ನಡೆಸಿದ್ದರ ವಿರುದ್ಧ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೀಡಿದ್ದ ಸಲಹೆಯನ್ನೂ ಧಿಕ್ಕರಿಸಿದ್ದ ರಾಜಾ, ಪ್ರಧಾನಿಗೆ ಖಾರವಾಗಿ ಪತ್ರವನ್ನೂ ಬರೆದಿದ್ದರು. ಇದು ಸುಪ್ರೀಂ ಕೋರ್ಟ್ ಆಕ್ರೋಶಕ್ಕೂ ಕಾರಣವಾಗಿತ್ತು.

ರಾಜಾ ಕೊಳ್ಳೆ ಹೊಡೆಯುತ್ತಿದ್ದಾಗ ಸುಮ್ಮನಿದ್ದರು ಎಂಬ ಕಾರಣಕ್ಕಾಗಿ ಪ್ರಧಾನಿಯವರನ್ನೂ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಇಡೀ ಪ್ರಕರಣ ಹೊರ ಬರುವಲ್ಲಿ ಶ್ರಮಿಸಿದ ಮೂಲ ಪುರುಷ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ. ಅವರು ಎರಡು ವರ್ಷಗಳ ಹಿಂದೆಯೇ ಪ್ರಧಾನಿಗೆ ಪತ್ರ ಬರೆದು, ರಾಜಾ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದರು. ಇತ್ತೀಚೆಗಷ್ಟೇ ಅವರು ನ್ಯಾಯಾಲಯಕ್ಕೂ ಹೋಗಿದ್ದರು.

ಸಂಬಂಧಕ್ಕೆ ಧಕ್ಕೆಯಿಲ್ಲ: ಡಿಎಂಕೆ-ಕಾಂಗ್ರೆಸ್
ರಾಜಾ ಬಂಧನದ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಿರುವ ಡಿಎಂಕೆ, ಇದರಿಂದಾಗಿ ಕಾಂಗ್ರೆಸ್ ಜತೆಗಿನ ಸಂಬಂಧಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ. ಯುಪಿಎ ಸರಕಾರದ ಪ್ರಮುಖ ಮೈತ್ರಿ ಪಕ್ಷವಾಗಿ ಡಿಎಂಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಇದೇ ರೀತಿ ಕಾಂಗ್ರೆಸ್ ಕೂಡ ಪ್ರತಿಕ್ರಿಯಿಸಿದೆ. ಇದು ಕಾನೂನಿಗೆ ಸಂಬಂಧಪಟ್ಟ ವಿಚಾರ, ರಾಜಕೀಯ ವಿಚಾರವಲ್ಲ. ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಜತೆಯಾಗಿ ಸ್ಪರ್ಧಿಸಲಿವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ.

ತೀರಾ ವಿಳಂಬವಾಯಿತು: ಬಿಜೆಪಿ
'ಸ್ಪೆಕ್ಟ್ರಮ್' ರಾಜಾ ಬಂಧನಕ್ಕೆ ಬಿಜೆಪಿ ತೀವ್ರ ನಿರಾಸೆ ವ್ಯಕ್ತಪಡಿಸಿದೆ. ಇದು ತೀರಾ ವಿಳಂಬವಾಗಿ ನಡೆದ ಕ್ರಮವಾಗಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಲೇಖನಗಳು