ಕಳೆದ ಹಲವಾರು ವರ್ಷಗಳಿಂದ ತಣ್ಣಗಾಗಿದ್ದ ಕಾಂಗ್ರೆಸ್‌ನೊಳಗೆ ನಿಧಾನವಾಗಿ ಮತ್ತೆ ಅಸಮಾಧಾನಗಳು ಭುಗಿಲೇಳುತ್ತಿವೆ. ಪಕ್ಷವು ಸಾಗುತ್ತಿರುವ ಹಾದಿಯ ಕುರಿತು ಹಲವರು ನಿರಾಸೆಗೊಂಡಿದ್ದಾರೆ. ಇದರ ಭಾಗವೇನೋ ಎಂಬಂತೆ ಆಂಧ್ರಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಸೋನಿಯಾ ಗಾಂಧಿಯ ನಾಯಕತ್ವದ ಕುರಿತು ಪ್ರಶ್ನೆ ಎಸೆದಿದ್ದಾರೆ.
ಇಂತಹ ಹಲವಾರು ಗಂಭೀರ ಪ್ರಶ್ನೆಗಳನ್ನು ಎಸೆದಿರುವುದು ಜಿ. ವೆಂಕಟಸ್ವಾಮಿ. ಆಂಧ್ರಪ್ರದೇಶದಲ್ಲಿ 'ಕಾಕಾ' ಎಂದೇ ಪ್ರಸಿದ್ಧರಾದವರು. 1950ರ ಹೊತ್ತಿನಲ್ಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ವೆಂಕಟಸ್ವಾಮಿ 1957ರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದವರು. ಅವರ ವಯಸ್ಸೀಗ 82.
ಶರದ್ ಪವಾರ್, ರಾಜೇಶ್ ಪೈಲಟ್, ಪಿ.ಎ. ಸಂಗ್ಮಾ ಅವರಂತಹ ನಾಯಕರ ನಂತರ ಸೋನಿಯಾ ಗಾಂಧಿ ವಿರುದ್ಧ ಕಾಂಗ್ರೆಸ್‌ನಲ್ಲಿ ಉಸಿರೆತ್ತುವವರು ಇರಲಿಲ್ಲ. ಆದರೆ ಈಗ ವೆಂಕಟಸ್ವಾಮಿ ಆ ಸಾಲಿಗೆ ಸೇರಿದ್ದಾರೆ. ಸೋನಿಯಾ ಗಾಂಧಿ ಕಾಂಗ್ರೆಸ್‌ನಿಂದ ತೊಲಗಲೇಬೇಕು ಎಂದು ಆಗ್ರಹಿಸಿದರು.
ಸೋನಿಯಾ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ. ಆಕೆ ಅಧ್ಯಕ್ಷ ಗಾದಿಯನ್ನು ತೊರೆಯಲೇಬೇಕು ಎಂದು ಟಿವಿ ಕ್ಯಾಮರಾಗಳ ಮುಂದೆ ಅಬ್ಬರಿಸಿರುವ ಕಾಂಗ್ರೆಸ್ ಹಿರಿಯ ನಾಯಕ, ಪಕ್ಷದ ಅಧ್ಯಕ್ಷೆಯ ವಿದೇಶಿ ಮೂಲವನ್ನೂ ಕೆದಕಿದರು.
ಸೋನಿಯಾ ಗಾಂಧಿಗೆ ಯಾವ ಹೋರಾಟದ ಹಿನ್ನೆಲೆಯಿದೆ? ಅವರ ರಾಜಕೀಯ ಹಿನ್ನೆಲೆ ಏನು ಎಂದು ಪ್ರಶ್ನಿಸಿರುವ ಅವರು, ಆಕೆ ಕೆಲವೇ ಕೆಲವು ಮಂದಿಯ ಸಲಹೆಗಳನ್ನು ಕೇಳುವ ಒಲವು ಮಾತ್ರ ಹೊಂದಿದ್ದಾರೆ ಎಂದು ಆರೋಪಿಸಿದರು.
ಇತರ ಕಾಂಗ್ರೆಸ್ ನಾಯಕರಂತೆ ಸೋನಿಯಾ ಗಾಂಧಿ ತಳಮಟ್ಟದಿಂದ ಬಂದವರಲ್ಲ. ಅವರಿಗೆ ಹೋರಾಟದ ರೂಪುರೇಷೆಗಳು ಗೊತ್ತಿಲ್ಲ. ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎನ್ನುವುದೂ ಆಕೆಗೆ ಗೊತ್ತಿಲ್ಲ. ಕೆಲವೇ ಕೆಲವು ಮಂದಿಯ ಸಲಹೆ ಮೇರೆಗೆ 125 ವರ್ಷಗಳ ಇತಿಹಾಸ ಹೊಂದಿರುವ ಪಕ್ಷವನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಕಿಡಿ ಕಾರಿದರು.
60 ವರ್ಷಗಳಿಂದ ಕಾಂಗ್ರೆಸ್ ನಾಯಕನಾಗಿದ್ದ ಹೊರತಾಗಿಯೂ ತನ್ನನ್ನು ಗೌರವದಿಂದ ನಡೆಸಿಕೊಳ್ಳದೇ ಇರುವುದರ ವಿರುದ್ಧ ಮಾಜಿ ಕೇಂದ್ರ ಸಚಿವರೂ ಆಗಿರುವ ವೆಂಕಟಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ವಿರುದ್ಧ ಮಾತನಾಡಿರುವುದರಿಂದ ನಿಮ್ಮನ್ನು ಪಕ್ಷದಿಂದ ಹೊರಗೆ ಹಾಕಬಹುದಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೂ ವೆಂಕಟಸ್ವಾಮಿ ಆಕ್ರೋಶದಿಂದ ಉತ್ತರಿಸಿದರು.
ನಾನು ಕಾಂಗ್ರೆಸ್ಸಿಗ. ನನ್ನನ್ನು ಹೊರಗೆ ಕಳುಹಿಸುವ ತಾಕತ್ತು ಯಾರಿಗಿದೆ? ಕಾಂಗ್ರೆಸ್ ಪಕ್ಷವನ್ನು ವಿದೇಶೀಯರು ಅಲ್ಲ, ಭಾರತೀಯರು ಮುನ್ನಡೆಸಬೇಕು ಎಂದು ಹೇಳುವ ಸಮಯವಿದು. ಆಕೆ ಪಕ್ಷವನ್ನು ನಡೆಸುತ್ತಿರುವುದರ ವಿರುದ್ಧ ನನ್ನಂತೆ ಹಲವರಿಗೆ ಅಸಮಾಧಾನಗಳಿವೆ. ಆಕೆ ತೊಲಗಲೇಬೇಕು ಎಂದು ತನ್ನ ನಿಲುವನ್ನು ವೆಂಕಟಸ್ವಾಮಿ ಸ್ಪಷ್ಟಪಡಿಸಿದರು.
ಅವರಿಗೆ ತಲೆಕೆಟ್ಟಿದೆ: ಹೈಕಮಾಂಡ್ ಸೋನಿಯಾ ವಿರುದ್ಧ ಕಿಡಿ ಕಾರಿರುವ ವೆಂಕಟಸ್ವಾಮಿ ಮೇಲೆ ಮುಗಿ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ಅವರಿಗೆ ತಲೆ ಕೆಟ್ಟಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದೆನಿಸುತ್ತದೆ. ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಹಾಗೂ ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿ ವೀರಪ್ಪ ಮೊಯ್ಲಿ, ಆಂಧ್ರ ಕಾಂಗ್ರೆಸ್ ನಾಯಕ ವೆಂಕಟಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅದು ಯಾವ ರೀತಿಯದ್ದು ಎಂಬುದನ್ನು ಕಾದು ನೋಡಿ. ಇದನ್ನು ಗಂಭೀರವಾಗಿ ನಾವು ಪರಿಗಣಿಸಿರುವುದಂತೂ ಹೌದು ಎಂದಿದ್ದಾರೆ.
ಪ್ಲೇಟ್ ಬದಲಾಯಿಸಿದ 'ಕಾಕಾ' ತನ್ನ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ವೆಂಕಟಸ್ವಾಮಿಯವರು ಸೋನಿಯಾ ಗಾಂಧಿ ವಿರುದ್ಧದ ಎಲ್ಲಾ ಟೀಕೆಗಳನ್ನೂ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಪಕ್ಷವು ತೆಲಂಗಾಣ ಪ್ರಾಂತ್ಯದಲ್ಲಿ ಹಿನ್ನಡೆ ಅನುಭವಿಸಬಹುದು ಎಂಬ ಭೀತಿಯಿಂದ ನಾನು ಅಂತಹ ಹೇಳಿಕೆ ನೀಡಿದ್ದೆ. ನನ್ನ ಎಲ್ಲಾ ಹೇಳಿಕೆಗಳನ್ನು ಹಿಂದಕ್ಕೆ ಪಡೆಯಲು ನಾನು ಸಿದ್ಧ. ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವಂತೆ ನಾನು ಸೋನಿಯಾಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅದೇ ಹೊತ್ತಿಗೆ, ತನ್ನನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿದರೆ ತೆಲಂಗಾಣ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಕಟ್ಟುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.