ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗನ್‌ಗೆ ತಿರುಮಂತ್ರ; ಕಾಂಗ್ರೆಸ್ ಜತೆ ಚಿರಂಜೀವಿ ಪಕ್ಷ ವಿಲೀನ (Congress | Praja Rajyam Party | Chiranjeevi | Sonia Gandhi)
ಜಗನ್‌ಗೆ ತಿರುಮಂತ್ರ; ಕಾಂಗ್ರೆಸ್ ಜತೆ ಚಿರಂಜೀವಿ ಪಕ್ಷ ವಿಲೀನ
ಹೈದರಾಬಾದ್, ಗುರುವಾರ, 3 ಫೆಬ್ರವರಿ 2011( 11:54 IST )
ವೈಎಸ್ ಜಗನ್ ಮೋಹನ್ ರೆಡ್ಡಿ ಪುಂಡಾಟಿಕೆಯನ್ನು ನಿಯಂತ್ರಿಸಲು ಹೊಸ ಮಾರ್ಗವನ್ನು ಕಂಡುಕೊಂಡಿರುವ ಕಾಂಗ್ರೆಸ್, ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷವನ್ನು ತನ್ನೊಳಗೆ ವಿಲೀನ ಮಾಡಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಶೀಘ್ರದಲ್ಲೇ ಚಿರಂಜೀವಿಯವರು ಸೋನಿಯಾ ಗಾಂಧಿಯನ್ನು ಭೇಟಿಯಾಗಲಿದ್ದು, ಭಾನುವಾರದ ಹೊತ್ತಿಗೆ ಎಲ್ಲವೂ ಸ್ಪಷ್ಟವಾಗಲಿದೆ.
ಕಾಂಗ್ರೆಸ್ ಮೂಲಗಳೇ ಹೇಳುವ ಪ್ರಕಾರ ಚಿರಂಜೀವಿ-ಸೋನಿಯಾ ಭೇಟಿ ಭಾನುವಾರ ನಡೆಯಲಿದೆ. ಇದುವರೆಗೆ ನಡೆಸಲಾದ ಮಾತುಕತೆಯ ಪ್ರಕಾರ ಕಾಂಗ್ರೆಸ್ ಜತೆ ವಿಲೀನಗೊಳ್ಳುವ ಪ್ರಸ್ತಾಪವನ್ನು ಸೋನಿಯಾ ಅಧಿಕೃತವಾಗಿ ಅಂದು ಮುಂದಿಡಲಿದ್ದಾರೆ. ಆ ಬಳಿಕ ಚಿರಂಜೀವಿಯವರು ಅವರ ಪಕ್ಷದ ಶಾಸಕರ ಜತೆ ಸಮಾಲೋಚನೆ ನಡೆಸುತ್ತಾರೆ.
ಇಲ್ಲೂ ವಿಶೇಷವೆಂದರೆ ಚಿರಂಜೀವಿ ಜತೆಗೆ ಭಾನುವಾರ ಅವರ ಪಕ್ಷದ ಶಾಸಕರು ಕೂಡ ದೆಹಲಿಗೆ ತೆರಳುತ್ತಿರುವುದು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಚಿರಂಜೀವಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ತಾವು ಬದ್ಧ ಎಂದು ಅವರ ಶಾಸಕರು ಹೇಳುವ ಸಾಧ್ಯತೆಗಳಿವೆ. ಬಳಿಕ ವಿಲೀನ ಸಂಬಂಧದ ಅಂತಿಮ ಸುತ್ತಿನ ಮಾತುಕತೆಗಳು ನಡೆಯಬಹುದು.
ಪ್ರಸಕ್ತ ಆಂಧ್ರಪ್ರದೇಶ ಸರಕಾರದ ಸಂಪುಟದಲ್ಲಿನ ಸ್ಥಾನ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಂದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡ ನಂತರ ಎಲ್ಲಾ ಶಾಸಕರ ಜತೆ ಸೋನಿಯಾ ಗಾಂಧಿ ಫೋಟೋ ಸೆಷನ್ ನಡೆಯಲಿದೆ. ಆ ಮೂಲಕ ಪ್ರಜಾರಾಜ್ಯಂ ಪಕ್ಷ (ಪಿಆರ್‌ಪಿ) ಕಾಂಗ್ರೆಸ್‌ನೊಳಗೆ ವಿಲೀನಗೊಳ್ಳುವ ಅಧಿಕೃತ ಹೇಳಿಕೆ ಹೊರ ಬೀಳಲಿದೆ.
ಜಗನ್ ತಂತ್ರಕ್ಕೆ ಪ್ರತಿತಂತ್ರ... ಒಂದು ಕಡೆಯಿಂದ ಕಾಂಗ್ರೆಸ್, ಮತ್ತೊಂದು ಕಡೆಯಿಂದ ಪ್ರಜಾರಾಜ್ಯಂ ಶಾಸಕರು ಮತ್ತು ಸಂಸದರನ್ನು ಸೆಳೆದುಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಮಾಜಿ ಸಂಸದ ಜಗನ್ ಇನ್ನೇನು ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬುದನ್ನು ಗಟ್ಟಿ ಮಾಡಿಕೊಂಡಿರುವ ಕಾಂಗ್ರೆಸ್, ಸರಕಾರವನ್ನು ರಕ್ಷಿಸಲು ಇಂತಹ ಕಾರ್ಯಕ್ಕೆ ಮುಂದಾಗಿದೆ.
ರೋಸಯ್ಯ ಕೈಯಿಂದ ಮುಖ್ಯಮಂತ್ರಿ ಪದವಿಯನ್ನು ಕಿತ್ತು ಕಿರಣ್ ಕುಮಾರ್ ರೆಡ್ಡಿಗೆ ನೀಡಲಾಗಿತ್ತು. ಅವರು ಅಧಿಕಾರಕ್ಕೆ ಬಂದ ನಂತರ ಅವರದ್ದು ಮುಳ್ಳಿನ ಹಾಸಿಗೆ. ಯಾವ ಕ್ಷಣದಲ್ಲಾದರೂ ಅಪಾಯಕ್ಕೆ ಸಿಲುಕಬಹುದಾದ ಸ್ಥಿತಿ ಅವರದ್ದು. ಹಾಗಾಗಿ ಒಂದು ವೇಳೆ ಜಗನ್ ಆಟಕ್ಕಿಳಿದರೂ, ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಚಿರಂಜೀವಿ ಪಕ್ಷವನ್ನೇ ಸೆಳೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿತ್ತು.