ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ಪೆಕ್ಟ್ರಮ್' ರಾಜಾ ಸಿಬಿಐ ವಶಕ್ಕೆ | ಎಲ್ಲಾ ನಾಟಕ: ಜಯಲಲಿತಾ (2G scam | CBI | A Raja | Jayalalitha)
2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ, ದೂರಸಂಪರ್ಕ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರಾ ಮತ್ತು ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ ಅವರನ್ನು ವಿಶೇಷ ನ್ಯಾಯಾಲಯವು ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ರಾಜಾ ಮತ್ತು ಇತರ ಇಬ್ಬರನ್ನು ನಿನ್ನೆಯಷ್ಟೇ ಸಿಬಿಐ ಬಂಧಿಸಿತ್ತು. ಇಂದು (ಗುರುವಾರ) ಅವರನ್ನು ಪಾಟಿಯಾಲಾ ಹೌಸ್ ನ್ಯಾಯಾಲಯದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರ ಮುಂದೆ ಹಾಜರುಪಡಿಸಲಾಯಿತು. ನಂತರ ಬಂಧಿತರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಇದೆಲ್ಲವೂ ನಾಟಕ: ಜಯಲಲಿತಾ...
2ಜಿ ಹಗರಣ ಸಂಬಂಧ ಮಾಜಿ ಸಚಿವ ಎ. ರಾಜಾರನ್ನು ಬಂಧಿಸಿರುವುದು ಪೂರ್ವ ನಿಯೋಜಿತ ಎಂದಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ, ಇದು ನಾವು ಕ್ರಮ ಕೈಗೊಂಡಿದ್ದೇವೆ ಎಂದು ಸುಪ್ರೀಂ ಕೋರ್ಟಿಗೆ ಹೇಳಲು ಮತ್ತು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಲು ಹೂಡಿರುವ ತಂತ್ರ ಎಂದು ಟೀಕಿಸಿದ್ದಾರೆ.

ಇಡೀ ಪ್ರಸಂಗ ವ್ಯವಸ್ಥಿತವಾಗಿ ರೂಪಿಸಲಾಗಿರುವುದು ಸ್ಪಷ್ಟ. ನಿಜವಾಗಿಯೂ ರಾಜಾರನ್ನು ಬಂಧಿಸುವುದಿದ್ದರೆ, ಈ ಹಿಂದೆಯೇ ನಡೆದು ಹೋಗಬೇಕಿತ್ತು. ಈಗ ಜನರ ಬಾಯಿಯಿಂದ ಹೇಳಿಸಿಕೊಳ್ಳಲು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

2ಜಿ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಹೊರತುಪಡಿಸಿದ ಯಾವುದೇ ವಿಚಾರಕ್ಕೂ ತಾನು ಬಗ್ಗುವುದಿಲ್ಲ ಎಂದೂ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಜಯಲಲಿತಾ, ರಾಜಾ ತಪ್ಪಿತಸ್ಥನಲ್ಲ ಎಂದು ಈ ಹಿಂದೆ ಹೇಳಿರುವುದನ್ನು ಪ್ರಶ್ನಿಸಿದ್ದಾರೆ.

ರಾಜಾಗೆ ಡಿಎಂಕೆ ಸಂಪೂರ್ಣ ಬೆಂಬಲ...
ತನ್ನ ಪಕ್ಷದ ನಾಯಕ ರಾಜಾ ಸಿಬಿಐ ಬಂಧನಕ್ಕೊಳಗಾದ ಮರುದಿನ ಮಹತ್ವದ ಸಭೆ ನಡೆಸಿರುವ ಡಿಎಂಕೆ, ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಿದ್ದು ಮಾಜಿ ಸಚಿವರನ್ನು ಬೆಂಬಲಿಸಲು ನಿರ್ಧರಿಸಿದೆ.

ಡಿಎಂಕೆ ವರಿಷ್ಠ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿಲುವನ್ನು ಅಂಗೀಕರಿಸಲಾಗಿದೆ. ರಾಜಾ ವಿರುದ್ಧ ಇರುವ ಏಕೈಕ ಸಾಕ್ಷ್ಯವೆಂದರೆ ಸಂಸತ್ತಿನಲ್ಲಿ ಮಂಡಿಸಲಾಗಿರುವ ಸಿಎಜಿ ವರದಿ. ಹಾಗಾಗಿ 2ಜಿ ಹಗರಣ ಪ್ರತಿಪಕ್ಷಗಳ ತಂತ್ರವೇ ಹೊರತು, ಅದರಲ್ಲಿ ಏನೂ ಹುರುಳಿಲ್ಲ ಎಂಬ ನಿರ್ಣಯಕ್ಕೆ ಬರಲಾಯಿತು.

2ಜಿ ಹಗರಣ ಆರೋಪದಲ್ಲಿ ಬಂಧನಕ್ಕೊಳಗಾದ ಮಾತ್ರಕ್ಕೆ ರಾಜಾ ಅವರು ತಪ್ಪಿತಸ್ಥನಲ್ಲ. ಪಕ್ಷದ ಗೌರವವನ್ನು ಹಾಳು ಮಾಡುವ ಸಲುವಾಗಿ ಪ್ರತಿಪಕ್ಷಗಳು ಅವರನ್ನು ಗುರಿ ಮಾಡಿದ್ದವೇ ಹೊರತು ಬೇರೆನ್ನಿನ್ನೇನಿಲ್ಲ. ಎನ್‌ಡಿಎ ಸರಕಾರದಲ್ಲಿ ಇದೇ ರೀತಿ ನಡೆದಿದೆ ಎಂದು ಸಿಎಜಿ ವರದಿ ಹೇಳಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಡಿಎಂಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇವನ್ನೂ ಓದಿ