ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಗಲಭೆಗೆ ಸಹಕರಿಸಿದ್ದ ಮೋದಿ ಮೇಲೆ ತೂಗುಗತ್ತಿ? (Gujarat | Narendra Modi | Supreme Court | RK Raghavan)
ಗುಜರಾತ್ ಕೋಮುಗಲಭೆಗಳಿಗೆ ಪರೋಕ್ಷವಾಗಿ ಹಲವು ರೀತಿಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಸಹಕರಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸೇರಿದಂತೆ ಹಲವು ರೀತಿಯ ಗಂಭೀರ ಆರೋಪಗಳು ಅವರ ಮೇಲಿವೆ. ಆದರೂ ಇದನ್ನು ಸಮರ್ಥಿಸಿಕೊಳ್ಳುವ ಪ್ರಮುಖ ಪುರಾವೆಗಳು ಸಿಕ್ಕಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೇಮಕ ಮಾಡಿರುವ ವಿಶೇಷ ತನಿಖಾ ದಳ (ಸಿಟ್) ತನ್ನ ವರದಿಯಲ್ಲಿ ಹೇಳಿದೆ ಎಂದು ಟೆಹೆಲ್ಕಾ ಪತ್ರಿಕೆ ವರದಿ ಮಾಡಿದೆ.

ಗೋದ್ರಾ ಹಿಂಸಾಚಾರ ನಂತರದ ಗಲಭೆಯಲ್ಲಿ ಮೋದಿ ಪಾತ್ರದ ಬಗ್ಗೆ ಯಾವುದೇ ಮಹತ್ವದ ಪುರಾವೆಗಳಿಲ್ಲ ಸಿಟ್ ಕ್ಲೀನ್ ಚಿಟ್ ನೀಡಿದೆ ಎಂದು ಡಿಸೆಂಬರಿನಲ್ಲೇ ಕೆಲವು ಮಾಧ್ಯಮ ವರದಿಗಳು ಹೇಳಿದ್ದವು. ಇದೀಗ ಆ ವರದಿಯನ್ನು ಭೇದಿಸಿರುವ ಟೆಹೆಲ್ಕಾ, ಅದನ್ನು ಖಚಿತಪಡಿಸಿದೆ. ಆದರೂ ಮೋದಿ ವಿರುದ್ಧ ಹಲವು ಆರೋಪಗಳು ಇರುವುದು ಸಿಟ್ ಸಲ್ಲಿಸಿರುವ 600 ಪುಟಗಳ ವರದಿಯಲ್ಲಿ ದಾಖಲಾಗಿದೆ.

ಗುಜರಾತ್ ಗಲಭೆಗಳ ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಸುಮಾರು 32 ಆರೋಪಗಳ ಕುರಿತು ವಿಚಾರಣೆ ನಡೆದಿತ್ತು. ಇದು ಗುಜರಾತ್ ಸರಕಾರ, ಅದರ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಸರಕಾರದ ಭಾಗಗಳಾಗಿರುವ ಇತರರ ಕರ್ತವ್ಯಲೋಪ ಮತ್ತು ಅಧಿಕಾರ ಸೇರಿದಂತೆ ಇತರ ವಿಚಾರಗಳಿಗೆ ಸಂಬಂಧಪಟ್ಟದ್ದಾಗಿತ್ತು. ಕೆಲವು ಪ್ರಕರಣಗಳಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಕೂಡ ಸಿಕ್ಕಿವೆ. ಆದರೆ ಈ ದಾಖಲೆಗಳನ್ನು ಬಳಸಿಕೊಂಡು ಕಾನೂನಿನ ಪ್ರಕಾರ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಟ್ ಮುಖ್ಯಸ್ಥ ಆರ್.ಕೆ. ರಾಘವನ್ ತನ್ನ ವರದಿಯಲ್ಲಿ ಹೇಳಿದ್ದಾರೆ.

ಸಿಟ್ ತನಿಖಾ ತಂಡವು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿನ ಪ್ರಮುಖ ಅಂಶಗಳು ಕೆಳಗಿನಂತಿವೆ.

** ಗುಲ್ಬರ್ಗ್ ಸೊಸೈಟಿ ಮತ್ತು ಇತರ ಕಡೆಗಳಲ್ಲಿ ಮುಸ್ಲಿಮರ ಮೇಲೆ ಕ್ರೂರ ಮತ್ತು ಹಿಂಸಾಪೂರಿತ ದಾಳಿಗಳು ನಡೆದಾಗ, ಸರಕಾರವು ಪ್ರತಿಕ್ರಿಯಿಸಿದ ರೀತಿಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಗುಲ್ಬರ್ಗ್ ಸೊಸೈಟಿ, ನರೋಡಾ ಪಾಟಿಯಾ ಮತ್ತು ಇತರ ಕಡೆಗಳಲ್ಲಿ ದಾಳಿಗಳು ನಡೆದಾಗ, ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮಾನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಮುಖ್ಯಮಂತ್ರಿ ಕಡಿಮೆ ಮಾಡಲೆತ್ನಿಸಿದ್ದರು.

** ಹಿಂಸಾಚಾರದ ಸಂದರ್ಭದಲ್ಲಿ ತನ್ನ ಇಬ್ಬರು ಹಿರಿಯ ಸಚಿವರಾದ ಅಶೋಕ್ ಭಟ್ ಮತ್ತು ಐ.ಕೆ. ಜಡೇಜಾ ಅವರನ್ನು ಅಹಮದಾಬಾದ್ ನಗರ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಗುಜರಾತ್ ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಮೋದಿಯವರು ಕೂರಿಸಿದ್ದರು. ಪೊಲೀಸರ ಕರ್ತವ್ಯದಲ್ಲಿ ಮಧ್ಯಪ್ರವೇಶ ಮಾಡಲು ಮತ್ತು ವಿವಿಧೆಡೆ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳಿಗೆ ತಪ್ಪು ಆದೇಶಗಳನ್ನು ನೀಡಲು ಮೋದಿ ಈ ವಿವಾದಿತ ನಿರ್ಧಾರಕ್ಕೆ ಬಂದಿದ್ದರು ಎಂಬ ಕಲ್ಪನೆ ಭಾರೀ ಸುದ್ದಿಯಾಗಿತ್ತು.

** ಗಲಭೆಗಳ ಸಂದರ್ಭದಲ್ಲಿ ತಟಸ್ಥ ನಿಲುವಿಗೆ ಬಂದಿದ್ದ ಮತ್ತು ಹತ್ಯಾಕಾಂಡಗಳನ್ನು ತಡೆದಿದ್ದ ಪೊಲೀಸ್ ಅಧಿಕಾರಿಗಳನ್ನು ಅಚ್ಚರಿ ಪಡಬೇಕಾದ ರೀತಿಯಲ್ಲಿ ಗುಜರಾತ್ ಸರಕಾರವು ಮಹತ್ವವಿಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಿತ್ತು.

** ಹಿಂಸಾಚಾರಗಳು ನಡೆದ ಸಂದರ್ಭಗಳಲ್ಲಿನ ಪೊಲೀಸರ ನಿಸ್ತಂತು ಸಂಭಾಷಣೆಗಳ ದಾಖಲೆಗಳನ್ನು ಗುಜರಾತ್ ಸರಕಾರವು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿತ್ತು. ಗಲಭೆಯ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ನಡೆದ ಸಭೆಗಳು, ದಾಖಲೆಗಳು ಅಥವಾ ಈ ಬಗೆಗಿನ ಯಾವುದೇ ಮಾಹಿತಿಗಳನ್ನು ಉಳಿಸಿಕೊಳ್ಳಲಾಗಿಲ್ಲ.

** ಮುಖ್ಯಮಂತ್ರಿ ಮೋದಿಯವರು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಾಗ ತಾರತಮ್ಯ ನೀತಿ ಅನುಸರಿಸಿದ್ದರು. ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಕೊಲ್ಲಲ್ಪಟ್ಟಿದ್ದ ಅಹಮದಾಬಾದ್‌ಗೆ ಭೇಟಿ ನೀಡಲಿಲ್ಲ. ಆದರೆ ಅವರು ಒಂದೇ ದಿನ ಸುಮಾರು 300 ಕಿಲೋ ಮೀಟರ್ ಪ್ರಯಾಣ ಮಾಡಿ ಗೋದ್ರಾಕ್ಕೆ ಹೋಗಿದ್ದರು.

** 2002ರ ಫೆಬ್ರವರಿ 28ರಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಅಕ್ರಮ ಬಂದ್ ಅನ್ನು ತಡೆಯಲು ಗುಜರಾತ್ ಸರಕಾರವು ಯಾವುದೇ ಕ್ರಮಕ್ಕೆ ಬರಲಿಲ್ಲ. ಜತೆಗೆ ಬಿಜೆಪಿ ಕೂಡ ಈ ಬಂದ್ ಅನ್ನು ಬೆಂಬಲಿಸಿತ್ತು.

** ನರೋಡಾ ಪಾಟಿಯಾ ಮತ್ತು ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣಗಳ ತನಿಖೆಯನ್ನು ರಾಜ್ಯ ಪೊಲೀಸರು ಕಳಪೆ ರೀತಿಯಲ್ಲಿ ನಡೆಸಿದ್ದರು. ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಸಂಘ ಪರಿವಾರದ ಸದಸ್ಯರು ಮತ್ತು ಬಿಜೆಪಿ ನಾಯಕರ ಮೊಬೈಲ್ ದಾಖಲೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದರು.

** ಮೋದಿಯವರಿಗೆ ನೇರವಾಗಿ ವರದಿ ಮಾಡುತ್ತಿದ್ದ ಆಗಿನ ಗೃಹಸಚಿವ ಗೋರ್ಧನ್ ಝಡಾಫಿಯಾ ಮತ್ತು ಎಂ.ಕೆ. ಟಂಡನ್, ಪಿ.ಬಿ. ಗೋಂಡಿಯಾ ಮುಂತಾದ ಉನ್ನತ ಪೊಲೀಸ್ ಅಧಿಕಾರಿಗಳು ಗಲಭೆಗೆ ಸಹಕರಿಸಿರುವ ಬಗ್ಗೆ ಸಾಕ್ಷ್ಯಗಳಿವೆ.

** ಕೋಮುಗಲಭೆಯ ಸೂಕ್ಷ್ಮ ಪ್ರಕರಣಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್ ಜತೆ ಸಂಬಂಧ ಹೊಂದಿರುವ ವಕೀಲರುಗಳನ್ನು ಸರಕಾರಿ ವಕೀಲರುಗಳನ್ನಾಗಿ ಗುಜರಾತ್ ಸರಕಾರವು ನೇಮಕ ಮಾಡಿತ್ತು.
ಇವನ್ನೂ ಓದಿ