ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ ಭಾರತವನ್ನು ಕ್ಯಾನ್ಸರಿನಂತೆ ನುಂಗುತ್ತಿದೆ: ಕಲಾಂ (Corruption | India | APJ Abdul Kalam | Manmohan Singh)
ಭಾರತವು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸುವುದು ಕೂಡ ಒಂದು ಎಂದು ಅಭಿಪ್ರಾಯಪಟ್ಟಿರುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಕ್ಯಾನ್ಸರ್ ರೀತಿಯಲ್ಲಿ ದೇಶವನ್ನೇ ನುಂಗುತ್ತಿರುವ ರಾಜಕೀಯ-ಅಧಿಕಾರಶಾಹಿ-ನ್ಯಾಯಾಂಗ ವ್ಯವಸ್ಥೆಯಲ್ಲಿನ ರೋಗಕ್ಕೆ ತುರ್ತು ಕಿಮೋಥೆರಪಿ ಅಗತ್ಯವಿದೆ ಎಂದರು.

ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ಯಾನ್ಸರ್ ರೀತಿಯ ಪರಿಸ್ಥಿತಿಯು ಉದ್ಭವಿಸಿದ್ದು, ಇದು ಪ್ರಗತಿಗೆ ಮಾರಕವಾಗಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ಕಿಮೋಥೆರಪಿಯ ಅಗತ್ಯ ದೇಶಕ್ಕಿದೆ ಎಂದು ದುಬೈಯಲ್ಲಿ ಮಾತನಾಡುತ್ತಿದ್ದ ಕಲಾಂ ತಿಳಿಸಿದರು.
PTI

ಭ್ರಷ್ಟಾಚಾರ ಮುಕ್ತ ಭಾರತವನ್ನು ಸ್ಥಾಪಿಸುವುದು ಪ್ರಮುಖ ಸವಾಲು. ನನ್ನ ಪ್ರಕಾರ ಇದಕ್ಕಿರುವ ಪರಿಹಾರ ಯುವಕರ ಪಡೆ. 'ನಾನು ಅದನ್ನು ಸಾಧಿಸಬಲ್ಲೆ. ನಾವು ಅದನ್ನು ಸಾಧಿಸಬಲ್ಲೆವು. ಭಾರತವು ಅದನ್ನು ಸಾಧಿಸಬಹುದು' ಎಂಬ ಸ್ಫೂರ್ತಿ ನಮ್ಮದಾಗಬೇಕು ಎಂದು ಪತ್ರಿಕೆಯೊಂದರ ಜತೆ ಹಂಚಿಕೊಂಡರು.

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮೌಲ್ಯಯುತ ವ್ಯವಸ್ಥೆಯು ಕುಸಿತಕ್ಕೊಳಗಾಗುತ್ತಿರುವುದು ಮತ್ತು ದಿನದಿಂದ ದಿನಕ್ಕೆ ಅದು ಏರುಗತಿಯಲ್ಲಿ ಸಾಗುತ್ತಿರುವುದು ಜನತೆಯ ಕಳವಳ, ಹತಾಶೆ ಮತ್ತು ಬೇಗುದಿಗೆ ಕಾರಣವಾಗಿದೆ. ಇದನ್ನು ದುರಸ್ತಿಗೊಳಿಸಲು ವಿಶೇಷ ತುರ್ತು ಕ್ರಮದ ಅಗತ್ಯವಿದೆ ಎಂದು ವಾಕ್ಝರಿಗೆ ಹೆಸರಾಗಿರುವ ಮಾಜಿ ರಾಷ್ಟ್ರಪತಿ ಕರೆ ನೀಡಿದರು.

ಇದೇ ಪರಿಸ್ಥಿತಿ ಮುಂದುವರಿಯಲು ಅವಕಾಶ ನೀಡಿದಲ್ಲಿ, ನಾವು ಜನತೆ ಬೀದಿಗಿಳಿಯುವುದನ್ನು ತಡೆಯಲು ಸಾಧ್ಯವಾಗದು. ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತ ಹೊರಟಿರುವ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಅದನ್ನು ಭರಿಸುವುದು ಕಷ್ಟ ಎಂದರು.

ಭ್ರಷ್ಟಾಚಾರದಿಂದ ಘನತೆಗೆ ಕಳಂಕ: ಪ್ರಧಾನಿ
ಸರಣಿ ಹಗರಣಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಕೂಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಇದರಿಂದಾಗಿ ಭಾರತದ ಜಾಗತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದರು.

ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಎರಡನೇ ವಾರ್ಷಿಕ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಉತ್ತಮ ಆಡಳಿತದ ಬೇರುಗಳಿಗೆ ಭ್ರಷ್ಟಾಚಾರ ಹೊಡೆತ ನೀಡುತ್ತಿದೆ. ಇದು ತೀವ್ರಗತಿಯಲ್ಲಿ ಸಾಗುತ್ತಿರುವ ಪ್ರಗತಿಗೂ ಮಾರಕವಾಗಿದೆ. ಭಾರತದ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಕಳಂಕವನ್ನು ಅಂಟಿಸುವ ಭ್ರಷ್ಟಾಚಾರ, ಜನತೆಯ ಮುಂದೆ ನಮ್ಮನ್ನು ಕುಬ್ಜರನ್ನಾಗಿ ಮಾಡುತ್ತಿದೆ ಎಂದು ವಿಷಾದಿಸಿದರು.
ಇವನ್ನೂ ಓದಿ