ದೂರಸಂಪರ್ಕ ಮಾಜಿ ಸಚಿವ ಹಾಗೂ ಡಿಎಂಕೆ ಸಂಸದ ಎ. ರಾಜಾ ಜೈಲು ಸೇರಲು ಕಾರಣವಾಗಿದ್ದ 2ಜಿ ತರಂಗಾಂತರ ಹಂಚಿಕೆ ಹಗರಣ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಸುತ್ತಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಪ್ರಕರಣದಲ್ಲಿ ಕರುಣಾನಿಧಿ, ರಾಜಾ ಪತ್ನಿ ಮತ್ತು ಸಂಬಂಧಿಕರನ್ನು ಸಹ ಆರೋಪಿಗಳನ್ನಾಗಿ ಹೆಸರಿಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವುದೇ ಈ ಸಂಬಂಧ ನಡೆದಿರುವ ಹೊಸ ಬೆಳವಣಿಗೆ.
ರಾಜಾ ಏಕಾಂಗಿಯಾಗಿ ಹಗರಣ ನಡೆಸಿರಲು ಸಾಧ್ಯವಿಲ್ಲ. ದೇಶವನ್ನು ಲೂಟಿ ಹೊಡೆದಿರುವುದರಲ್ಲಿ ಕರುಣಾನಿಧಿ ಕೂಡ ಓರ್ವ ಪಿತೂರಿದಾರ. ಈ ಸಂಬಂಧ ಕರುಣಾನಿಧಿಯವರನ್ನು ಇತರ ಕೆಲವು ಮಂದಿಯ ಜತೆ ಸಹ ಆರೋಪಿಯನ್ನಾಗಿ ಮಾಡಬೇಕೆಂದು ಹೆಚ್ಚುವರಿ ಅರ್ಜಿಯನ್ನು ಸಿದ್ಧಪಡಿಸಿದ್ದೇನೆ ಎಂದು ದೆಹಲಿಯ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.
2ಜಿ ಹಗರಣ ಪ್ರಕರಣದಲ್ಲಿ ರಾಜಾ ಜತೆ ಡಿಎಂಕೆ ವರಿಷ್ಠ ಕರುಣಾನಿಧಿಯವರನ್ನು ಕೂಡ ನಾನು ಆರೋಪಿಯನ್ನಾಗಿ ಹೆಸರಿಸಿದ್ದೇನೆ. ಈ ಪಟ್ಟಿಗೆ ಮುಂದಿನ ದಿನಗಳಲ್ಲಿ ಇತರ ಆರೋಪಗಳ ಮೇಲೆ ಇನ್ನಿತರ ಕೆಲವು ಹೆಸರುಗಳು ಕೂಡ ಸೇರಿಕೊಳ್ಳಲಿವೆ. ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಕುರಿತು ಸಿಬಿಐ ವಿಸ್ತೃತ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು.
ನ್ಯಾಯಾಲಯದಲ್ಲಿ ಕರುಣಾನಿಧಿ ಹೆಸರು ಪ್ರಸ್ತಾಪಿಸಿರುವುದರಿಂದ ಹಗರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಒಂದು ವೇಳೆ ನ್ಯಾಯಾಲಯವು ಕರುಣಾನಿಧಿಯವರನ್ನು ಸಹ ಆರೋಪಿಯನ್ನಾಗಿ ಹೆಸರಿಸಲು ಒಪ್ಪಿಗೆ ಸೂಚಿಸಿದಲ್ಲಿ, ಅದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಗೆ ಮಹತ್ವದ ಹಿನ್ನಡೆ ಎನಿಸಬಹುದು ಎಂದು ಹೇಳಲಾಗುತ್ತಿದೆ.
ಹಗರಣದ ಕುರಿತ ತನಿಖೆಯ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಸಿಬಿಐಗೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಸ್ವಾಮಿ ಎತ್ತಿರುವ ರಾಷ್ಟ್ರೀಯ ಭದ್ರತೆಯ ವಿಚಾರವು ತನಿಖೆಯ ವ್ಯಾಪ್ತಿಯಲ್ಲಿ ಬಂದಿದೆಯೇ ಎಂದೂ ಪ್ರಶ್ನಿಸಿದೆ.
2ಜಿ ಹಗರಣ ಪ್ರಕರಣದಲ್ಲಿ ರಾಜಾ ವಿರುದ್ಧ ಕ್ರಮ ಕೈಗೊಳ್ಳುವ ಮನವಿಯ ಸಂಬಂಧ ಸಿಬಿಐಗೆ ನೋಟೀಸ್ ಜಾರಿ ಮಾಡಿದ್ದು ಸಿಬಿಐ ನ್ಯಾಯಮೂರ್ತಿ ಪ್ರದೀಪ್ ಛಡ್ಡಾ. ಫೆಬ್ರವರಿ 22ರಂದು ಉತ್ತರಿಸುವಂತೆ ನೋಟೀಸ್ ನೀಡಲಾಗಿದೆ.
ಸಿಎಜಿ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಏಳು ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಸ್ವಾಮಿ ಜನವರಿ 17ರಂದು ಕೋರ್ಟಿಗೆ ಮನವಿ ಮಾಡಿದ್ದರು. ಅದರಂತೆ ಸಿಎಜಿ ಪರ ಅಧಿಕಾರಿಗಳು ಈಗಾಗಲೇ ಹಾಜರಾಗಿದ್ದಾರೆ. ಮುಂದಿನ ಸರದಿ ಸಿಬಿಐ ಅಧಿಕಾರಿಗಳದ್ದು.
ಸರಕಾರಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ಸಲ್ಲಿಸಿದ್ದ ವರದಿಗೆ ಕಾರಣವಾದ 2ಜಿ ಹಗರಣದಲ್ಲಿ ರಾಜಾ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಸ್ವಾಮಿಯವರು ಖಾಸಗಿ ದೂರೊಂದನ್ನು ನೀಡಿದ್ದರು. ಅದರ ವಿಚಾರಣೆಯ ಮುಂದುವರಿದ ಪ್ರಕ್ರಿಯೆ ಇಂದು ನಡೆಯಿತು.