ಪ್ರಜಾ ರಾಜ್ಯಂ ಪಕ್ಷದ ಮುಖ್ಯಸ್ಥ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೆ.ಚಿರಂಜೀವಿ, ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಕುರಿತಂತೆ ಚರ್ಚಿಸಲು ಇಂದು ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿಯವರಿಗೆ ಮಾತುಕತೆಗಾಗಿ ಅಹ್ವಾನಿಸಿದ್ದು, ಇಂದು ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮಾಜಿ ಸಂಸದ ವೈಎಸ್ ಜಗನ್ಮೋಹನ್ ರೆಡ್ಡಿಯವರ ಜನಪ್ರಿಯತೆಯಿಂದ ಕಂಗಾಲಾದ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಿ ಅಥವಾ ಸರಕಾರಕ್ಕೆ ಬೆಂಬಲ ಸೂಚಿಸುವಂತೆ ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿಯನ್ನು ಓಲೈಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.
ಆಂಧ್ರಪ್ರದೇಶದ 294 ವಿಧಾನಸಭೆ ಸದಸ್ಯರಲ್ಲಿ ಪ್ರಜಾರಾಜ್ಯಂ ಪಕ್ಷ 10 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ 156 ಶಾಸಕರೊಂದಿಗೆ ಬಹುಮತ ಹೊಂದಿದೆ.
ಕಾಂಗ್ರೆಸ್ ಶಾಸಕರಲ್ಲಿ ಕನಿಷ್ಠ 12 ಶಾಸಕರು, ವೈಎಸ್‌ಆರ್ ಪಕ್ಷದ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿಯವರ ಬೆಂಬಲಿಗರಾಗಿದ್ದರಿಂದ, ಯಾವುದೇ ಕ್ಷಣದಲ್ಲಿ ಪಕ್ಷವನ್ನು ತೊರೆಯುವ ಸಾಧ್ಯತೆಗಳಿವೆ. ಒಂದು ವೇಳೆ ಈ ಶಾಕರು ಪಕ್ಷವನ್ನು ತೊರೆದಲ್ಲಿ ಬಹುಮತ ಕುಸಿಯಲಿರುವುದರಿಂದ ಕಾಂಗ್ರೆಸ್, ಪ್ರಜಾರಾಜ್ಯಂ ಪಕ್ಷದ ಶಾಸಕರನ್ನು ಸೆಳೆಯವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದೆ.
ಪಿಆರ್‌ಪಿ ಮುಖ್ಯಸ್ಥ ಚಿರಂಜೀವಿ, ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರೊಂದಿಗೆ ಕಳೆದರಡು ದಿನಗಳಿಂದ ಚರ್ಚೆಯಲ್ಲಿ ತೊಡಗಿದ್ದು, ಸೋನಿಯಾ ಗಾಂಧಿಯವರ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.
ಬಹುತೇಕ ಪಿಆರ್‌ಪಿ ಶಾಸಕರು ಕಾಂಗ್ರೆಸ್‌ನೊಂದಿಗೆ ವಿಲೀನವಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಆದರೆ, ಸರಕಾರಕ್ಕೆ ಬೆಂಬಲ ಸೂಚಿಸುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.