ಹಿಂದೂ ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ಭಾರತ ಹಿಂದೇಟು:ಪಾಕ್
ಥಿಂಪು, ಭಾನುವಾರ, 6 ಫೆಬ್ರವರಿ 2011( 11:44 IST )
PTI
ಮುಂಬೈ ದಾಳಿಯನ್ನು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಹೋಲಿಕೆ ಮಾಡುವುದು ಸೂಕ್ತವಲ್ಲ.ಸಂಜೋತಾ ಸ್ಫೋಟದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಭಾರತ ಪಾಕಿಸ್ತಾನದ ಹೇಳಿಕೆಯನ್ನು ತಿರಸ್ಕರಿಸಿದೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಘಟನೆ ನಡೆದ ನಾಲ್ಕು ವರ್ಷಗಳ ನಂತರವೂ ತನಿಖೆ ಏಕೆ ಮುಕ್ತಾಯಗೊಂಡಿಲ್ಲ.ಪ್ರಕರಣದಲ್ಲಿ ಹಿಂದೂ ಭಯೋತ್ಪಾದಕರಿರುವುದರಿಂದ ತನಿಖೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪಾಕಿಸ್ತಾನ ಕಟುವಾಗಿ ಟೀಕಿಸಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಮಾತುಕತೆಯ ನಂತರವೂ, ಇಸ್ಲಾಮಾಬಾದ್ ಉದ್ರೇಕಕಾರಿ ಹೇಳಿಕೆ ನೀಡಿ ಹಿಂದೂ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಭಾರತದ ಸರಕಾರ ಅಸಮರ್ಥವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದೆ.
ಹಿಂದೂ ಭಯೋತ್ಪಾದಕರು ಸೇನೆಯ ಕೆಲ ಮುಖ್ಯಸ್ಥರೊಂದಿಗೆ ನಂಟು ಹೊಂದಿರುವುದರಿಂದ, ಭಾರತ ಸರಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ಹೇಳಿದ್ದಾರೆ.
ಭಾರತದ ಸರಕಾರ ಕಳೆದ 2007ರಿಂದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ತನಿಖೆ ಆಶಾದಾಕವಾಗಿಲ್ಲ. ಭಾರತ ಹೇಳಿದಂತೆ ಮಾಡುವುದನ್ನು ಕಲಿಯಬೇಕಾಗಿದೆ ಎಂದು ಕಿಡಿಕಾರಿದ್ದಾರೆ.
ಮುಂಬೈ ದಾಳಿಯ ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದೆ. ಆದರೆ, ಸಂಜೋತಾ ಪ್ರಕರಣದ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಬಷೀರ್ ಹೇಳಿಕೆ ನೀಡಿದ್ದಾರೆ.