ಚಿರು ನೇತೃತ್ವದ ಪ್ರಜಾರಾಜ್ಯಂ, ಕಾಂಗ್ರೆಸ್ ಪಕ್ಷದಲ್ಲಿ ವಿಲೀನ
ನವದೆಹಲಿ, ಸೋಮವಾರ, 7 ಫೆಬ್ರವರಿ 2011( 10:02 IST )
PTI
ಕಳೆದ 30 ತಿಂಗಳುಗಳ ಹಿಂದೆ ಐದು ಲಕ್ಷ ಜನತೆಯ ಸಮ್ಮುಖದಲ್ಲಿ ಪ್ರಜಾರಾಜ್ಯಂ ಪಕ್ಷವನ್ನು ಹುಟ್ಟುಹಾಕಿದ್ದ ಪಕ್ಷದ ಮುಖ್ಯಸ್ಥ ಹಾಗೂ ತೆಲುಗು ಸೂಪರ್‌ಸ್ಟಾರ್ ನಟ ಚಿರಂಜೀವಿ, ಇದೀಗ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.
ಮಾಜಿ ಸಂಸದ ವೈಎಸ್ ಜಗನ್ಮೋಹನ್ ಬೆದರಿಕೆಯಿಂದ ಕಂಗಾಲಾಗಿದ್ದ ಕಾಂಗ್ರೆಸ್ ಪಕ್ಷ, ಪ್ರಜಾರಾಜ್ಯಂ ಪಕ್ಷವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ನಡೆದ 15 ನಿಮಿಷಗಳ ಮಾತುಕತೆಯಲ್ಲಿ, ಸೂಕ್ತ ನಿರ್ಣಯಕ್ಕೆ ಬರಲಾಗಿದ್ದು, ಆಂಧ್ರಪ್ರದೇಶದ ಜನತೆಯ ಹಿತಾಸಕ್ತಿಗಾಗಿ ಪ್ರಜಾರಾಜ್ಯಂ ಪಕ್ಷವನ್ನು ವಿಲೀನಗೊಳಿಸಲಾಗಿದೆ ಎಂದು ಚಿರಂಜೀವಿ ತಿಳಿಸಿದ್ದಾರೆ.
ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಯಾವುದೇ ಷರತ್ತುಗಳನ್ನು ಒಡ್ಡಿಲ್ಲ. ಬೇಷರತ್ತಾಗಿ ಪಕ್ಷವನ್ನು ವಿಲೀನಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ಹೊತ್ತಿರುವ ಎಂ.ವೀರಪ್ಪ ಮೊಯಿಲಿ, ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಗಿದ್ದು,ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಕೇಂದ್ರ ರಕ್ಷಣಾ ಖಾತೆ ಸಚಿವ.ಎ.ಕೆ.ಅಂಟೋನಿ,ಕಳೆದ ವಾರ ಹೈದ್ರಾಬಾದ್‌ನಲ್ಲಿ ಚಿರಂಜೀವಿಯವರನ್ನು ಭೇಟಿ ಮಾಡಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ಅಹ್ವಾನ ನೀಡಿದ್ದರು.