ಗಾಂಧಿ-ನೆಹರು ಕುಟುಂಬ ರಾಜಕೀಯದ ಉತ್ತರಾಧಿಕಾರ ಬಿಜೆಪಿ ಸಂಸದ ವರುಣ್ ಗಾಂಧಿಗೆ ಸಿಗದೇ ಇರಬಹುದು, ಆದರೆ ತನ್ನ ಅಜ್ಜಿ ಇಂದಿರಾ ಗಾಂಧಿಯವರ ಬನಾರಸ್ ಸೀರೆಯನ್ನು ಉಡುವ ಭಾಗ್ಯ ಅವರ ಬೆಂಗಾಲಿ ಭಾವಿ ಪತ್ನಿ ಯಾಮಿನಿ ರಾಯ್‌ಗೆ ಒಲಿದಿದೆ. ಮಾರ್ಚ್ 6ರಂದು ನಡೆಯುವ ಇವರಿಬ್ಬರ ಮದುವೆಯಲ್ಲಿ ಅದೇ ಸೀರೆಯಲ್ಲಿ ಯಾಮಿನಿ ಗ್ರಹಸ್ಥಾಶ್ರಮಕ್ಕೆ ಪ್ರವೇಶಿಸಲಿದ್ದಾರೆ.
ತನ್ನ ಕಿರಿಯ ಪುತ್ರ ಸಂಜಯ್ ಗಾಂಧಿಯನ್ನು ಮದುವೆಯಾಗಿದ್ದ ಸಂದರ್ಭದಲ್ಲಿ ಸೊಸೆ ಮೇನಕಾ ಗಾಂಧಿಗೆ ಪ್ರೀತಿಯಿಂದ ಮಾಜಿ ಪ್ರಧಾನ ಮಂತ್ರಿ ನೀಡಿದ್ದ ಉಡುಗೊರೆಯದು. ಅದನ್ನು ಸ್ವತಃ ಇಂದಿರಾ ಗಾಂಧಿಯವರು ಬಳಸಿದ್ದರು ಎಂದು ಹೇಳಲಾಗಿದೆ. ಚಿನ್ನದ ಜರಿಗಳನ್ನು ಹೊಂದಿರುವ ನಸುಗೆಂಪು ಬಣ್ಣದ ಈ ಬನಾರಸ್ ಸೀರೆಯನ್ನು ಮೇನಕಾ ಗಾಂಧಿ ತನ್ನ ಸೊಸೆಗೆ ನೀಡುತ್ತಿದ್ದಾರೆ.
ಮಾರ್ಚ್ 8ರಂದು ನಡೆಯುವ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ವರುಣ್ ಪತ್ನಿಯಾಗಲಿರುವ ಯಾಮಿನಿ 100 ವರ್ಷ ಹಳೆಯದಾದ ಬನಾರಸ್ ಸೀರೆಯನ್ನು ಸೇರಿಕೊಳ್ಳಲಿದ್ದಾರೆ. ಕಿತ್ತಲೆ ಮತ್ತು ಹೊಂಬಣ್ಣದ ಈ ಸೀರೆ ವರುಣ್ ಗಾಂಧಿ ಮುತ್ತಜ್ಜಿ ಕಮಲಾ ನೆಹರೂ ಅವರಿಗೆ ಸೇರಿದ್ದು.
ಜತೆಗೆ ಗಾಂಧಿ-ನೆಹರು ಕುಟುಂಬ ಮತ್ತು ತನ್ನ ಕುಟುಂಬಕ್ಕೆ ಸೇರಿದ ಪರಂಪರಾಗತ ಚಿನ್ನಾಭರಣಗಳನ್ನು ಕೂಡ ಯಾಮಿನಿ ರಾವ್ ಅಂದು ತೊಡಲಿದ್ದಾರೆ.
ವಾರಣಾಸಿಯಲ್ಲಿನ ಹನುಮಾನ್ ಘಾಟ್‌ನಲ್ಲಿನ ಕಂಚಿ ಶಂಕರಾಚಾರ್ಯ ದೇಗುಲದಲ್ಲಿ ನಡೆಯುವ ಸರಳ, ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭದಲ್ಲಿ ವರುಣ್ ಗಾಂಧಿ ಬಿಳಿ ಧೋತಿ ಮತ್ತು ಹೊಂಬಣ್ಣದ ಕುರ್ತಾ ಧರಿಸಲಿದ್ದಾರೆ. ಭಾನುವಾರ ನಡೆಯುವ ಈ ವಿವಾಹವನ್ನು ಸ್ವತಃ ಶಂಕರಾಚಾರ್ಯರು ನೆರವೇರಿಸಲಿದ್ದಾರೆ.
ಮದುವೆ ಕಾರ್ಯಕ್ರಮದ ಬಳಿಕ ತಮ್ಮ ಕುಟುಂಬದ ಸದಸ್ಯರ ಜತೆ ದಂಪತಿ ಖಾಸಗಿ ವಿಮಾನದಲ್ಲಿ ದೆಹಲಿಗೆ ಹಾರಲಿದ್ದಾರೆ.
ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ -- ಇಬ್ಬರೂ ಉತ್ತರ ಪ್ರದೇಶದ ಫಿಲಿಬಿಟ್ ಮತ್ತು ಅವೋನ್ಲಾದ ಬಿಜೆಪಿ ಸಂಸದರಾಗಿರುವುದರಿಂದ ಮದುವೆ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ನಡೆಸಲು ತೀರ್ಮಾನಿಸಿದ್ದಾರೆ. ಸಮಾರಂಭಕ್ಕೆ ಕಾಶಿ, ಬಾನ್ಸಿ, ಪದ್ರುವನಾ, ಬಿಜ್ನಾವುರ್, ಮಂಕಾಪುರ್, ಬಿಂಗಾ ಮತ್ತು ಅಯೋಧ್ಯೆಯ 'ಅರಸರು' ಆಗಮಿಸಲಿದ್ದಾರೆ. ಜತೆಗೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಕೂಡ ಸಾಕ್ಷಿಯಾಗಲಿದ್ದಾರೆ.
ಕರ್ನಾಟಕದ ಭೋಜನವೂ ಪಟ್ಟಿಯಲ್ಲಿದೆ... ಮಾರ್ಚ್ 8ರಂದು ದೆಹಲಿಯಲ್ಲಿ ನಡೆಯುವ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ಕರ್ನಾಟಕದ ಖಾದ್ಯಗಳೂ ಇರಲಿವೆ. ಸುಮಾರು 1,200 ಆಯ್ದ ಗಣ್ಯರನ್ನು ಆಹ್ವಾನಿಸಲಾಗುವ ಈ ಔತಣಕೂಟ ವಿಶೇಷವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಕಾಶ್ಮೀರ, ಬೆಂಗಾಲಿ, ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್, ಗುಜರಾತ್, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಕರ್ನಾಟಕಗಳ ಶುದ್ಧ ಸಸ್ಯಾಹಾರ ಖಾದ್ಯಗಳು ಲಭ್ಯವಿರುತ್ತವೆ ಎಂದು ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪುನೀತ್ ಸಿಕಂದ್ ತಿಳಿಸಿದ್ದಾರೆ.
ಮದುವೆ ಜಂಜಾಟಗಳು ಮುಗಿದ ನಂತರ ಏಪ್ರಿಲ್‌ನಲ್ಲಿ ದಂಪತಿ ದಕ್ಷಿಣ ಇಟಲಿಯ ಸುಂದರ ಪ್ರಕೃತಿಗೆ ಹೆಸರಾಗಿರುವ ಅಮಾಲ್ಫಿ ಕರಾವಳಿಗೆ ಎರಡು ವಾರಗಳ ಮಧುಚಂದ್ರ ಪ್ರವಾಸಕ್ಕೆ ತೆರಳಲಿದ್ದಾರೆ.