ಕಾಂಗ್ರೆಸ್ ಅಧ್ಯಕ್ಷ ಸ್ಥಾನವು ಕುಟುಂಬವೊಂದರ ಏಕಸ್ವಾಮ್ಯತೆಗೊಳಪಟ್ಟಿದೆ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದ ಎಲ್.ಕೆ. ಅಡ್ವಾಣಿಯವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅವರಿಗೆ ಬಿಜೆಪಿಯಲ್ಲೇ ಈಗ ನೆಲೆಯಿಲ್ಲದಂತಾಗಿದೆ. ಅಂತಹ ಹೊತ್ತಿನಲ್ಲಿ ಸುದ್ದಿಯಲ್ಲಿರಲು ಹೀಗೆ ಮಾತನಾಡುತ್ತಿದ್ದಾರೆ ಎಂದಿದೆ.
ಅಡ್ವಾಣಿಯವರು ತನ್ನದೇ ಪಕ್ಷ ಬಿಜೆಪಿಯೊಳಗೆ ಎಲ್ಲಾ ರೀತಿಯ ಅಧಿಕಾರ ಕಳೆದುಕೊಂಡ ನಂತರ ಸುದ್ದಿಯಲ್ಲಿರಲು ಸರ್ಕಸ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಟೀಕಿಸಿದರು.
ಇದೊಂದು ಹಳೆಯ ಲೇಖಕನೊಬ್ಬ ಮಾಡುತ್ತಿರುವ ಪುರಾತನ ಆರೋಪ. ವೈನ್ ಮತ್ತು ಬಾಟಲಿ -- ಎರಡೂ ಹಳೆಯದು. ಪ್ರಧಾನ ಮಂತ್ರಿಯಾಗಲು ಇದೇ ಆರೋಪಗಳನ್ನು ಮಾಡಿದ ವ್ಯಕ್ತಿ ಈಗ ಹತಾಶೆಯಿಂದ ಬಡಬಡಿಸುತ್ತಿದ್ದಾರೆ. ಹಾಗೆ ಮಾಡಿದರೂ ಅವರಿಗೆ ಪ್ರಧಾನ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಬದಲಿಗೆ ಶಾಶ್ವತವಾಗಿ ಕಾಯುತ್ತಿರುವ ಪ್ರಧಾನಿಯ ಪಟ್ಟಕ್ಕೆ ಅವರು ಕುಸಿದಿದ್ದಾರೆ ಎಂದು ಸಿಂಘ್ವಿ ಲೇವಡಿ ಮಾಡಿದರು.
ಕಾಂಗ್ರೆಸ್ ಪ್ರತಿ ವರ್ಷ ಹೊಸ ಅಧ್ಯಕ್ಷರನ್ನು ಕಾಣುವ ದಿನಗಳಿದ್ದವು. ಆ ಬಳಿಕ ಎಷ್ಟೊಂದು ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಆ ಪಕ್ಷದ ಅಧ್ಯಕ್ಷ ಗಾದಿಯು ಕುಟುಂಬವೊಂದರ ಏಕಸ್ವಾಮ್ಯಕ್ಕೊಳಪಟ್ಟಿದೆ. ಅದೂ ಜೀವನ ಪರ್ಯಂತ ಎಂದು ಆಡ್ವಾಣಿಯವರು ಇತ್ತೀಚೆಗಷ್ಟೇ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರ, 'ಪಕ್ಷದೊಳಗೆ ಆಂತರಿಕ ಚುನಾವಣೆಗಳನ್ನು ಆರಂಭಿಸಿದ ಮೊದಲ ಪಕ್ಷ ಕಾಂಗ್ರೆಸ್ ಎನ್ನುವುದನ್ನು ಆಡ್ವಾಣಿ ಮರೆತಿದ್ದಾರೆ. ಸೋನಿಯಾ ಗಾಂಧಿಯವರು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳಲ್ಲಿ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿದ್ದಾರೆ' ಎಂದರು.
ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿರುವ ಮತ್ತು ಮತ್ತು ತನ್ನದೇ ಪಕ್ಷದಲ್ಲಿ ಎಲ್ಲಾ ರೀತಿಯ ಅಧಿಕಾರಗಳನ್ನು ಕಳೆದುಕೊಂಡಿರುವ ವ್ಯಕ್ತಿಗೆ ಇದರಿಂದ ಯಾಕಾದರೂ ತಲೆನೋವು ಬರುತ್ತದೆ, ಇದಕ್ಕೆ ಕಾರಣವೇನು ಎಂದು ನನಗೆ ತಿಳಿಯುತ್ತಿಲ್ಲ. ಅವರೀಗ ಸದಾ ಸುದ್ದಿಯಲ್ಲಿರಲು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಎಂದು ಬಿಜೆಪಿ ವರಿಷ್ಠನನ್ನು ಸಿಂಘ್ವಿ ಗೇಲಿ ಮಾಡಿದರು.
ಕಾಂಗ್ರೆಸ್ ಮೇಲೆ ತನ್ನ ಜೀವಿತಾವಧಿಯುದ್ಧಕ್ಕೂ ವಿಶೇಷವಾದ ಪ್ರಭಾವ ಮತ್ತು ನಿಯಂತ್ರಣ ಹೊಂದಿದ್ದ ಮಹಾತ್ಮಾ ಗಾಂಧೀಜಿಯವರು ಸಹ ಆ ಪಕ್ಷದ ಅಧ್ಯಕ್ಷರಾಗಿದ್ದು ಕೇವಲ ಒಂದು ಬಾರಿ. ಅವರು 1924ರಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ಅಡ್ವಾಣಿ ತನ್ನ ಬ್ಲಾಗಿನಲ್ಲಿ ವಿಶ್ಲೇಷಿಸಿದ್ದರು.
ಸೋನಿಯಾ ಗಾಂಧಿ ಸತತ ನಾಲ್ಕನೇ ಅವಧಿಗೆ ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪುನರಾಯ್ಕೆಗೊಂಡಿದ್ದರು. ಈ ಹಿಂದಿದ್ದ ಮೂರು ವರ್ಷಗಳ ಬದಲಿಗೆ ಅಧ್ಯಕ್ಷ ಗಾದಿಯ ಅವಧಿಯನ್ನು ಐದು ವರ್ಷಕ್ಕೆ ಈಗ ವಿಸ್ತರಿಸಲಾಗಿದೆ.