ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡಿಎಸ್‌ಪಿಯಿಂದ ಬೂಟಿನ ಕೊಳೆ ಒರೆಸಿಕೊಂಡ ಮಾಯಾವತಿ!
(Security officer wipes Mayawati's shoes | Mayawati | Uttar Pradesh | Padam Singh)
ಡಿಎಸ್‌ಪಿಯಿಂದ ಬೂಟಿನ ಕೊಳೆ ಒರೆಸಿಕೊಂಡ ಮಾಯಾವತಿ!
ಲಕ್ನೋ, ಮಂಗಳವಾರ, 8 ಫೆಬ್ರವರಿ 2011( 13:48 IST )
ಮಾಯಾವತಿ ಎಂದರೆ ಮುಖ್ಯಮಂತ್ರಿ ಎಂಬ ಪದವಿಗಿಂತ ಮಿಗಿಲು ಎಂಬಂತೆ ಈ ಹಿಂದಿನಿಂದಲೂ ನಡೆದುಕೊಳ್ಳುತ್ತಾ ಬಂದವರು. ಅದನ್ನು ನಿಜವೆಂಬಂತೆ ಬಿಂಬಿಸಲು ಸಮರ್ಥರಾದ ಭಟರ ಪಟಾಲಂ ಅವರ ಜತೆಗಿರುತ್ತದೆ. ಈಗ ನಡೆದಿರುವುದೂ ಅದೇ. ಉತ್ತರ ಪ್ರದೇಶ ಮುಖ್ಯಮಂತ್ರಿಯವರಿಗೆ ಭದ್ರತಾ ಒದಗಿಸಲು ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬ, ಅವರ ಬೂಟುಗಳಿಗೆ ಮೆತ್ತಿಕೊಂಡಿದ್ದ ಧೂಳನ್ನು ಒರೆಸಿದ್ದಾನೆ.
PR
ಈ ಅಪಮಾನಕಾರಿ ಪ್ರಸಂಗ ನಡೆದಿರುವುದು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯಲ್ಲಿ. ಭಾನುವಾರ ಇಲ್ಲಿನ ಅಂಬೇಡ್ಕರ್ ಗ್ರಾಮಕ್ಕೆ ಮುಖ್ಯಮಂತ್ರಿ ಮಾಯಾವತಿ ತೆರಳಿದ್ದರು. ಹೆಲಿಕಾಪ್ಟರಿನಿಂದ ಅವರು ಕೆಳಗಿಳಿದ ನಂತರ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಜತೆ ಹೆಲಿಪ್ಯಾಡಿನಲ್ಲಿ ಮಾತುಕತೆ ನಡೆಸುತ್ತಿದ್ದರು.
ಈ ಹೊತ್ತಿನಲ್ಲಿ ಮುಖ್ಯಮಂತ್ರಿಯವರ ಪರ್ಸನಲ್ ಸೆಕ್ಯುರಿಟಿ ಆಫೀಸರ್ ಪದ್ಮಸಿಂಗ್, ಮಾಯಾವತಿಯವರ ಬೂಟುಗಳಲ್ಲಿ ಧೂಳು ಮೆತ್ತಿಕೊಂಡಿರುವುದನ್ನು ಗಮನಿಸಿದ್ದ. ತಡ ಮಾಡದ ಆತ, ತನ್ನ ಕಿಸೆಯಿಂದ ಕರವಸ್ತ್ರವನ್ನು ತೆಗೆದು ಎರಡೂ ಬೂಟುಗಳನ್ನು ಒರೆಸಿಯೇ ಬಿಟ್ಟ.
ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದ ಮಾಯಾವತಿ ಇದಕ್ಕೆ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸುವುದಾಗಲೀ, ಮುಜುಗರ ತೋರಿಸುವುದನ್ನಾಗಲಿ ಮಾಡಲಿಲ್ಲ. ತನಗೆ ಗೊತ್ತೇ ಇಲ್ಲದಂತೆ ವರ್ತಿಸಿದರು. ಇವೆಲ್ಲವೂ ಮಾಧ್ಯಮಗಳು ಚಿತ್ರೀಕರಿಸಿರುವ ವೀಡಿಯೋದಲ್ಲಿ ಬಹಿರಂಗವಾಗಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ( ಡಿಎಸ್‌ಪಿ) ದರ್ಜೆಯ ಅಧಿಕಾರಿಯಾಗಿರುವ ಪದ್ಮಸಿಂಗ್ ಕಳೆದ 15 ವರ್ಷಗಳಿಂದ ಮಾಯಾವತಿಯವರ ಭದ್ರತಾ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಇತ್ತೀಚೆಗಷ್ಟೇ ಆತನ ಸೇವೆಯನ್ನು ಒಂದು ವರ್ಷಗಳ ಅವಧಿಗೆ ವಿಸ್ತರಿಸಲಾಗಿತ್ತು. ರಾಷ್ಟ್ರಪತಿಯವರಿಂದ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿಯನ್ನೂ ಈ ಅಧಿಕಾರಿ ಪಡೆದುಕೊಂಡಿದ್ದ.
ಪ್ರತಿಪಕ್ಷಗಳಿಂದ ಟೀಕೆ... ನಿರೀಕ್ಷೆಯಂತೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪ್ರತಿಪಕ್ಷಗಳು ಪ್ರಸಂಗವನ್ನು ಲೇವಡಿ ಮಾಡಿವೆ. ಇದು ಅಪಮಾನಕಾರಿ ಎಂದು ಬಣ್ಣಿಸಿವೆ.
ಪೊಲೀಸ್ ಅಧಿಕಾರಿಯೊಬ್ಬರಿಂದ ಬೂಟು ಶುಚಿಗೊಳಿಸಿಕೊಂಡಿರುವ ಮಾಯಾವತಿ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಉತ್ತರ ಪ್ರದೇಶದಲ್ಲಿ ಕಾನೂನು ಎಂಬುದೇ ಇಲ್ಲ. ಅಧಿಕಾರಿಗಳು ಈ ಮಟ್ಟಕ್ಕೆ ಇಳಿಯಬಾರದು ಎಂದು ಸಮಾಜವಾದಿ ಪಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಭದ್ರತಾ ಅಧಿಕಾರಿ ಬೂಟು ಶುಚಿಗೊಳಿಸುವುದನ್ನು ತಡೆಯದೇ ಇರುವ ಮೂಲಕ ಮುಖ್ಯಮಂತ್ರಿಯವರು ತಪ್ಪು ಸಂದೇಶ ರವಾನಿಸಿದ್ದಾರೆ. ಇದು ರಾಜ್ಯದ ಪೊಲೀಸ್ ಪಡೆಗಳ ನೈತಿಕತೆಯನ್ನು ಕುಗ್ಗಿಸುತ್ತದೆ ಎಂದು ಬಿಜೆಪಿ ಸಂಸದ ಕಲ್ರಾಜ್ ಮಿಶ್ರಾ ಹೇಳಿದ್ದರೆ, ಇದಕ್ಕೆ ಅವಕಾಶ ನೀಡಬಾರದಿತ್ತು; ಇದು ಪೊಲೀಸರಿಗೆ ಹೇಳಿ ಮಾಡಿಸಿದ್ದಲ್ಲ ಎಂದು ಕಾಂಗ್ರೆಸ್ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.