ಸಂಸತ್ತಿನ ಚಳಿಗಾಲದ ಅಧಿವೇಶನವು ಲವಲೇಶವಿಲ್ಲದೆ ಕಳೆದು ಹೋಗಿದೆ. ಆದರೆ ಮುಂಬರುವ ಬಜೆಟ್ ಅಧಿವೇಶನವೂ ಅದೇ ರೀತಿ ಆಗಬಾರದು ಎಂದು ಮುಂದಡಿಯಿಟ್ಟಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, 2ಜಿ ಹಗರಣ ಸಂಬಂಧ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ.
ಮಂಗಳವಾರ ಈ ಸಂಬಂಧ ಸಭೆ ನಡೆಸಿದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಪ್ರತಿಪಕ್ಷಗಳ ನಾಯಕರನ್ನು ಒಲಿಸಿಕೊಳ್ಳುವಲ್ಲಿ ಮತ್ತೆ ವಿಫಲರಾದರು. ಮಾತುಕತೆ ಯಾವುದೇ ಫಲ ನೀಡಿಲ್ಲ ಎಂದು ಸ್ವತಃ ಮುಖರ್ಜಿಯವರೇ ಹೇಳಿಕೆ ನೀಡಿದ್ದಾರೆ. ಆದರೆ ಮೂಲಗಳ ಪ್ರಕಾರ 2ಜಿ ಹಗರಣದ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಕುರಿತು ಸರಕಾರವು ಪ್ರತಿಪಕ್ಷಗಳ ಜತೆ ಸಂಧಾನಕ್ಕೆ ಬರಲಿದೆ.
ಇದು ಪ್ರತಿಪಕ್ಷಗಳ ನಾಯಕರ ಮಾತಿನಲ್ಲೇ ವ್ಯಕ್ತವಾಗಿದೆ. ಸರಕಾರದ ಜತೆ ನಡೆಸಿರುವ ಮಾತುಕತೆ ತೃಪ್ತಿದಾಯಕವಾಗಿದೆ. ಜೆಪಿಸಿ ತನಿಖೆಗೆ ಸರಕಾರ ಒಪ್ಪಿಗೆ ಸೂಚಿಸುವ ಭರವಸೆ ನಮ್ಮಲ್ಲಿದೆ ಎಂದು ಮಾತುಕತೆಯ ನಂತರ ಸಿಪಿಐ ಸಂಸದ ಗುರುದಾಸ್ ದಾಸ್‌ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 21ರಿಂದ ಬಜೆಟ್ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಂಸತ್ ಕಲಾಪವು ಸುಗಮವಾಗಿ ಸಾಗುವ ಕುರಿತು ಸಮಾಲೋಚನೆ ನಡೆಸಲು ಇಂದು ಮುಖರ್ಜಿಯವರು ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾಪ ನಡೆಸುವುದಕ್ಕಿಂತ ದೊಡ್ಡದು ಏನೂ ಅಲ್ಲ ಎಂದು ಹೇಳಿದ್ದು, ಸರಕಾರವು ಜೆಪಿಸಿ ರಚನೆಗೆ ಒಪ್ಪುವ ಸಂಕೇತಗಳನ್ನು ರವಾನಿಸಿದರು.
ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಮಂಜುಗಡ್ಡೆ ಕರಗುತ್ತಿದೆ. ಬಜೆಟ್ ಅಧಿವೇಶನಕ್ಕೂ ಮೊದಲು ನಾವು ಬಿಕ್ಕಟ್ಟು ನಿವಾರಣೆಗೆ ಸಾಧ್ಯವಾಗುವ ಒಂದು ದಾರಿಯನ್ನು ಪತ್ತೆ ಹಚ್ಚುತ್ತೇವೆ ಎಂದು ಸುಮಾರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಪಾಲ್ಗೊಂಡ ನಾಯಕರೊಬ್ಬರು ಹೇಳಿದ್ದಾರೆ.
1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಹಗರಣವನ್ನು ಜೆಪಿಸಿ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ, ಎಡಪಕ್ಷಗಳು ಮತ್ತು ಇತರ ಪ್ರತಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಅಲ್ಲದೆ, ಚಳಿಗಾಲದ ಅಧಿವೇಶನವನ್ನು ಸಂಪೂರ್ಣವಾಗಿ ವಿಫಲಗೊಳಿಸಿದ್ದವು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಹಲವು ಪಕ್ಷಗಳು ಹಿಂದಕ್ಕೆ ಸರಿದರೂ, ಬಿಜೆಪಿ ತನ್ನ ಪಟ್ಟು ಸಡಿಲಿಸಿರಲಿಲ್ಲ. ಹಾಗಾಗಿ ಸರಕಾರವು ತನ್ನ ನಿಲುವನ್ನು ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ಇದೇ ಪ್ರಕರಣದಲ್ಲಿ ಸಿಬಿಐ ಬಂಧಿಸಿರುವುದರಿಂದ ತಮ್ಮ ವಾದಕ್ಕೆ ಪುಷ್ಠಿ ಬಂದಂತಾಗಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಒಟ್ಟಾರೆ ಭಾರೀ ಚರ್ಚೆಗೆ ಕಾರಣವಾಗಿದ್ದ ಜೆಪಿಸಿ ಕುರಿತ ಸರಕಾರದ ನಿರ್ಧಾರ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳುವ ನಿರೀಕ್ಷೆಗಳಿವೆ.