ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಭೇಟಿಯಾಗಲೇ ಬೇಕು ಎಂದು ಪಟ್ಟು ಹಿಡಿದು ಕಾರಿನ ಎದುರುಗಡೆ ಕುಕ್ಕರಿಸಿ ಕುಳಿತಿದ್ದ ಮಹಿಳೆಯೊಬ್ಬರನ್ನು ಭದ್ರತಾ ಪಡೆಗಳು ಹೊರ ದಬ್ಬಿದ್ದವು. ಆ ಮಹಿಳೆಯನ್ನು ಈಗ ಭೇಟಿ ಮಾಡುವ ಮೂಲಕ ಕಾಂಗ್ರೆಸ್ ನಾಯಕ ಸುದ್ದಿ ಮಾಡಿದ್ದಾರೆ.
ಆಕೆಯನ್ನು ಶೋಭಾವತಿ ದೇವಿ ಎಂದು ಗುರುತಿಸಲಾಗಿದೆ. ಅಮೇಠಿಯಲ್ಲಿನ ಮುನ್ಶಿಗಂಜ್ ಅತಿಥಿ ಗೃಹದಲ್ಲಿದ್ದ ರಾಹುಲ್ ಗಾಂಧಿ, ಮಂಗಳವಾರ ಬೆಳಿಗ್ಗೆ ಅಲ್ಲೇ ಆಕೆಯನ್ನು ಭೇಟಿ ಮಾಡಿದರು. ಆಕೆಯ ಸಮಸ್ಯೆಯೇನು ಎಂಬುದನ್ನು ತಾಳ್ಮೆಯಿಂದ ಆಲಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ರಾಹುಲ್ ಸುಲ್ತಾನಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಶೋಭಾವತಿ ಭೇಟಿಗೆ ಯತ್ನಿಸಿದ್ದರು. ಇದಕ್ಕೆ ಭದ್ರತಾ ಅಧಿಕಾರಿಗಳು ತಡೆಯೊಡ್ಡಿದಾಗ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ್ದರು. ಇದನ್ನು ಗಮನಿಸಿದ್ದ ರಾಹುಲ್, ಅತಿಥಿ ಗೃಹಕ್ಕೆ ಬಂದು ಭೇಟಿ ಮಾಡುವಂತೆ ಸೂಚಿಸಿದ್ದರು.
ಹಂಚಿ ಹೋಗಿದ್ದ ಭೂಮಿಯನ್ನು ಒಂದೇ ಕಡೆ ಕ್ರೋಢೀಕರಿಸುವ ಸಂಬಂಧ ವ್ಯಕ್ತಿಯೊಬ್ಬನ ಜತೆ ತನ್ನ ಭೂಮಿಯನ್ನು ಅದಲು-ಬದಲು ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯದ ತಡೆ ಒಡ್ಡಿರುವ ಹೊರತಾಗಿಯೂ ಆತ ಜಾಗದಲ್ಲಿನ ಮರಗಳನ್ನು ಕಡಿಯುತ್ತಿದ್ದಾನೆ ಎಂದು ಶೋಭಾವತಿ ತನ್ನ ಅಳಲನ್ನು ರಾಹುಲ್ ಎದುರು ತೋಡಿಕೊಂಡರು.
ಆಕೆಯ ಸಮಸ್ಯೆಯನ್ನು ಆಲಿಸಿದ ರಾಹುಲ್ ಗಾಂಧಿ, ತಕ್ಷಣವೇ ಸುಲ್ತಾನಪುರ ಜಿಲ್ಲೆಯ ಅಧಿಕಾರಿಗಳನ್ನು ಕರೆಸಿ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸುವಂತೆ ಸೂಚಿಸಿದರು.
ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಲ್ಲಿ ಏನೇ ಬದಲಾವಣೆ ಮಾಡಿದರೂ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಹಾಗಾಗಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬಂಡಾ, ಕಾನ್ಪುರ ಮತ್ತು ಸುಲ್ತಾನಪುರದಲ್ಲಿನ ಮೂವರು ಅತ್ಯಾಚಾರ ಬಲಿಪಶು ಯುವತಿಯರನ್ನು ರಾಹುಲ್ ಕಳೆದೆರಡು ದಿನಗಳಲ್ಲಿ ಭೇಟಿ ಮಾಡಿದ್ದಾರೆ.