ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಗಣತಿಗೆ ಕಸಬ್; ಮುಂದಿನ ಸರದಿ ರೇಷನ್ ಕಾರ್ಡ್?!
(Pakistani terrorist | Ajmal Kasab | Mumbai attacks | National census)
ಜನಗಣತಿಗೆ ಕಸಬ್; ಮುಂದಿನ ಸರದಿ ರೇಷನ್ ಕಾರ್ಡ್?!
ಮುಂಬೈ, ಬುಧವಾರ, 9 ಫೆಬ್ರವರಿ 2011( 12:32 IST )
ಭಾರತದ ಒಟ್ಟು ಜನಸಂಖ್ಯೆಯನ್ನು ಲೆಕ್ಕ ಹಾಕುವ ಪ್ರಕ್ರಿಯೆಯ ಅಂಗವಾಗಿ ನಡೆಯುತ್ತಿರುವ 15ನೇ ರಾಷ್ಟ್ರೀಯ ಜನಗಣತಿಯಲ್ಲಿ 2008ರ ಮುಂಬೈ ದಾಳಿಯಲ್ಲಿ ಮರಣ ದಂಡನೆ ಶಿಕ್ಷೆ ಪಡೆದುಕೊಂಡಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಕೂಡ ಸ್ಥಾನ ಪಡೆಯಲಿದ್ದಾನೆ.
ವಿಶೇಷ ನ್ಯಾಯಾಲಯವು ನೀಡಿರುವ ಮರಣ ದಂಡನೆಯನ್ನು ಖಚಿತಪಡಿಸುವ ಮತ್ತು ಕಸಬ್ ಸಲ್ಲಿಸಿರುವ ಮೇಲ್ಮನವಿಯ ಕುರಿತ ತೀರ್ಪನ್ನು ಬಾಂಬೆ ಹೈಕೋರ್ಟ್ ಇನ್ನಷ್ಟೇ ನೀಡಬೇಕಿದ್ದು, ಪ್ರಸಕ್ತ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ.
ಜನಗಣತಿ ಎಂದರೆ ಭಾರತದಲ್ಲಿ ಆಶ್ರಯ ಪಡೆದಿರುವ ಎಲ್ಲರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಎರಡನೇ ಸುತ್ತಿನ ಜನಗಣತಿಯಲ್ಲಿ ಮುಂಬೈಯ ಆರ್ಥರ್ ರೋಡ್ ಮತ್ತು ಬೈಕುಲ್ಲಾ ಜೈಲುಗಳಲ್ಲಿನ ಎಲ್ಲಾ ಕೈದಿಗಳನ್ನೂ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಈ ಕುರಿತು ವಿವರಣೆ ನೀಡಿದ್ದಾರೆ.
ಹಾಗಾಗಿ ಕಸಬ್ ಒಬ್ಬನೇ ಅಲ್ಲ, ಭಾರತದ ಹಲವು ಜೈಲುಗಳಲ್ಲಿರುವ ಸಾವಿರಾರು ಉಗ್ರಗಾಮಿಗಳು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಕಸಬ್ ಸಾಲಿನಲ್ಲಿ ನೀವೂ ಇರಬಹುದು... Institutional household ಎಂಬ ಹೊಸ ವಿಭಾಗವನ್ನು ಈ ಬಾರಿ ಜನಗಣತಿಗೆ ಸೇರಿಸಲಾಗಿದೆ. ಅದರಲ್ಲಿ ಹಾಸ್ಟೆಲ್‌ಗಳು, ಜೈಲುಗಳು ಮತ್ತು ಆಸ್ಪತ್ರೆಗಳನ್ನು ಸೇರಿಸಲಾಗಿದೆ.
ಅಂದರೆ ಜನಗಣತಿ ಸಂದರ್ಭದಲ್ಲಿ ಹಾಸ್ಟೆಲ್‌ಗಳಲ್ಲಿ, ಜೈಲುಗಳಲ್ಲಿ, ಮತ್ತು ಆಸ್ಪತ್ರೆಗಳಿಗೆ ದಾಖಲಾಗಿದ್ದವರನ್ನು ಈ ಪಟ್ಟಿಗೆ ಸೇರಿಸಲಾಗುತ್ತದೆ. ಹಾಗಾಗಿ ಕಸಬ್ ಹಿಂದೆ ಅಥವಾ ಮುಂದೆ ನಿಮ್ಮ ಹೆಸರು ಸೇರಿಕೊಂಡರೂ ಅಚ್ಚರಿಯಿಲ್ಲ.
ಕಸಬ್‌ಗೆ ಇನ್ನು ರೇಷನ್ ಕಾರ್ಡ್? ಭಾರತದ ಜನಗಣತಿಗೆ ವಿದೇಶಿ ಭಯೋತ್ಪಾದಕರನ್ನೂ ಸೇರಿಸಿಕೊಳ್ಳಲಾಗುತ್ತಿರುವ ಕೇಂದ್ರ ಸರಕಾರದ ಕ್ರಮಕ್ಕೆ ಹೀಗೆಂದು ಟ್ವಿಟ್ಟರ್ ಮುಂತಾದ ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಲೇವಡಿ ಮಾಡಲಾಗುತ್ತಿದೆ.
ಈಗ ಪಾಕಿಸ್ತಾನಿ ಪಾತಕಿ ಕಸಬ್‌ನನ್ನು ಗಣತಿಗೆ ಸೇರಿಸಿಕೊಳ್ಳಲಾಗುತ್ತದೆ. ಯುಐಡಿ (ವಿಶಿಷ್ಟ ಗುರುತಿನ ಸಂಖ್ಯೆ), ಚುನಾವಣಾ ಗುರುತು ಪತ್ರ, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆಗಳನ್ನು ಯಾವಾಗ ನೀಡುತ್ತಾರೆ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ!