ಅಯೋಧ್ಯೆಯ ರಾಮಮಂದಿರ ವಿವಾವವನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ವಿಚಾರವನ್ನಾಗಿ ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.
ಕಾಶಿ ದೇವಿಯರ ಪಂಚಾಂಗ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ರಾಮಮಂದಿರವನ್ನು ಕೇವಲ ಚುನಾವಣಾ ವಿಚಾರವನ್ನಾಗಿಸಲು ಯಾವುದೇ ರಾಜಕೀಯ ಪಕ್ಷಕ್ಕೆ ನಾವು ಬಿಡುವುದಿಲ್ಲ ಎಂದರು.
ರಾಜಕೀಯ ಪಕ್ಷಗಳು ರಾಮಮಂದಿರ ವಿವಾದವನ್ನು ರಾಜಕೀಯ ಪಕ್ಷಗಳು ಹೇಗೆ ನೋಡುತ್ತಿವೆ ಎಂದು ಅವರಲ್ಲಿ ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ಹೇಳಿಕೊಂಡು ತನ್ನ ಸೀಟುಗಳನ್ನು ಹೆಚ್ಚಿಸಿಕೊಂಡ ಬಿಜೆಪಿ, ಪ್ರಸಕ್ತ ಆ ವಿವಾದದಿಂದ ಭಾಗಶಃ ದೂರ ಸರಿದಿದೆ. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗರು ಈಗ ರಾಮನನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ಮುಂತಾದ ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಮುಸ್ಲಿಮರ ಓಲೈಕೆಯಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳು ತೊಡಗಿವೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಬಿಜೆಪಿ, ಶಿವಸೇನೆಯಂತಹ ಪಕ್ಷಗಳು ಬೆಟ್ಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ತೊಗಾಡಿಯಾ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕುರಿತ ವಿಶ್ವ ಹಿಂದೂ ಪರಿಷತ್ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ತೊಗಾಡಿಯಾ, ಇಡೀ 67 ಎಕರೆ ಪ್ರದೇಶದಲ್ಲಿ ದೇಗುಲ ನಿರ್ಮಾಣವಾಗುತ್ತದೆ. ಇದಕ್ಕೆ ಹೊರತಾದ ಯಾವುದೇ ಸೂತ್ರಕ್ಕೂ ತಾವು ಒಪ್ಪುವುದಿಲ್ಲ ಎಂದರು.
ಸಾಕಷ್ಟು ದೇವಾಲಯಗಳನ್ನು ಹೊಂದಿರುವ, ದೇವನಗರಿ ಎಂದು ಗುರುತಿಸಿಕೊಳ್ಳುತ್ತಿರುವ ಕಾಶಿ ವಿಶ್ವದ ಏಕೈಕ ಪ್ರಾಚೀನ ನಗರ. ಹಾಗಾಗಿ ಕಾಶಿಯನ್ನು ವಿಶ್ವ ಪಾರಂಪರಿಕ ನಗರ ಎಂದು ಘೋಷಿಸಬೇಕು ಎಂದು ನಾವು ಬೇಡಿಕೆ ಇಡುತ್ತಿದ್ದೇವೆ ಎಂದೂ ಅವರು ಒತ್ತಾಯಿಸಿದರು.
ಕಾಶಿ ಎಂದರೆ ಮೋಕ್ಷದ ಮಾರ್ಗ ಎಂದು ಬಹುತೇಕ ಮಂದಿ ನಂಬಿದ್ದಾರೆ. ಆದರೆ 500ಕ್ಕೂ ಹೆಚ್ಚು ಪುರಾತನ ದೇಗುಲಗಳನ್ನು ಹೊಂದಿರುವ ಕಾಶಿಯು ಭಕ್ತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಎನ್ನುವ ಅರಿವು ಅವರಲ್ಲಿ ಬಹುತೇಕ ಮಂದಿಗಿಲ್ಲ ಎಂದು ತೊಗಾಡಿಯಾ ಅಭಿಪ್ರಾಯಪಟ್ಟರು.