ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದಿರಾ ಮನೆ ಪಾತ್ರೆ ತೊಳೆದಿದ್ದಕ್ಕೆ ಪ್ರತಿಭಾ ರಾಷ್ಟ್ರಪತಿಯಾದ್ರು!
(Indira Gandhi | Rajasthan | Amin Khan | Pratibha Patil)
ಇಂದಿರಾ ಮನೆ ಪಾತ್ರೆ ತೊಳೆದಿದ್ದಕ್ಕೆ ಪ್ರತಿಭಾ ರಾಷ್ಟ್ರಪತಿಯಾದ್ರು!
ಜೈಪುರ, ಬುಧವಾರ, 9 ಫೆಬ್ರವರಿ 2011( 15:26 IST )
ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಗೆ ಅಡುಗೆ ಮಾಡಿಕೊಟ್ಟಿದ್ದಕ್ಕೆ ಮತ್ತು ಪಾತ್ರೆಗಳನ್ನು ತೊಳೆದಿದ್ದಕ್ಕೆ ಪ್ರತಿಯಾಗಿ ಇಂದು ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಭಾರತದ ರಾಷ್ಟ್ರಪತಿಯಾಗಿದ್ದಾರೆ ಎಂದು ರಾಜಸ್ತಾನದ ಪಂಚಾಯತ್ ರಾಜ್ ಮತ್ತು ವಕ್ಫ್ ಸಚಿವ ಅಮೀನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸಂಜೆ ಪಾಲಿ ಜಿಲ್ಲೆಯ ಮಾನ್ಪುರ-ಬಖಾರಿ ಗ್ರಾಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮೀನ್ ಖಾನ್, '1977ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತು ಅಧಿಕಾರ ಕಳೆದುಕೊಂಡ ನಂತರ ರಾಷ್ಟ್ರಪತಿ ಪಾಟೀಲ್ ಅವರು ಇಂದಿರಾ ಗಾಂಧಿಯವರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಾ, ಪಾತ್ರೆಗಳನ್ನು ತೊಳೆಯುತ್ತಿದ್ದರು' ಎಂದರು.
PTI
ತನ್ನ ಮಾತನ್ನು ಮುಂದುವರಿಸುತ್ತಾ, ತನ್ನ ಸೇವೆಗಳಿಗಾಗಿ ಯಾವತ್ತೂ ಯಾವುದನ್ನೂ ಪಾಟೀಲ್ ಕೇಳಿರಲಿಲ್ಲ. ಕೊನೆಗೆ ಅದನ್ನು ಗೌರವಿಸಿದ್ದು ಸೋನಿಯಾ ಗಾಂಧಿ. ಕಾಂಗ್ರೆಸ್ ಅಧ್ಯಕ್ಷೆಯಿಂದ ಯಾವುದೇ ಸ್ಥಾನವನ್ನು ಪಾಟೀಲ್ ಬಯಸಿರಲಿಲ್ಲ. ಆದರೆ ಮಾಜಿ ಪ್ರಧಾನ ಮಂತ್ರಿಗೆ ತೋರಿಸಿದ ನಿಷ್ಠೆಗಾಗಿ ಈ ಗೌರವ ದಕ್ಕಿತು ಎಂದು ಕಾರ್ಯಕರ್ತರಿಗೆ ಹೇಗಿರಬೇಕು ಎಂದು ಅಮೀನ್ ಖಾನ್ ಪಾಠ ಮಾಡಿದರು.
ಭಾಷಣದ ನಂತರ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಸಚಿವರು, ನಾನು ಯಾರಿಗೂ ಅಗೌರವ ತೋರಿಸಿಲ್ಲ. ಸ್ವಾರ್ಥರಹಿತ ಸೇವೆ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ನಾನು ರಾಷ್ಟ್ರಪತಿ ಪಾಟೀಲ್ ಅವರ ಉದಾಹರಣೆಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ್ದೇನೆ. ಯಾವುದೇ ಬೇಡಿಕೆಯನ್ನು ಮುಂದಿಡದೆ, ತಾಳ್ಮೆಯಿಂದ ಪಕ್ಷದ ಸೇವೆ ಮಾಡಿ ಎಂದು ಹೇಳಿದ್ದೇನೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರತಿಯೊಬ್ಬರಿಗೂ ಮಾದರಿ. ಅವರಿಗೆ ಅಪಮಾನ ಉಂಟು ಮಾಡಲು ಈ ಮಾತು ಹೇಳಿಲ್ಲ ಎಂದರು.
ಇಂತಹ ಹೇಳಿಕೆ ಸಚಿವರೊಬ್ಬರಿಂದ ಬಂದಿರುವ ಬೆನ್ನಿಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ರಾಷ್ಟ್ರಪತಿಯೊಬ್ಬರ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದನ್ನು ಸರ್ವಥಾ ಸ್ವೀಕರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಚತುರ್ವೇದಿ ಆಗ್ರಹಿಸಿದ್ದಾರೆ.