ಆರುಷಿ ಮತ್ತು ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣವನ್ನು ಮುಚ್ಚಬೇಕು ಎಂದು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಬಾಲಕಿಯ ಹೆತ್ತವರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರನ್ನೇ ಆರೋಪಿಗಳನ್ನಾಗಿ ಮಾಡಿ ಸಮನ್ಸ್ ಜಾರಿಗೊಳಿಸಿದೆ. ಆ ಮೂಲಕ ಭಾರೀ ಸುದ್ದಿ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 201 ಮತ್ತು 34ರ ಅಡಿಯಲ್ಲಿ ಮಗಳು ಆರುಷಿ ಮತ್ತು ಸಹಾಯಕ ಹೇಮರಾಜ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ತಲ್ವಾರ್ ದಂಪತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇಡೀ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಿಬಿಐಗೆ ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯವು ಆದೇಶ ನೀಡಿದೆ.
ಈ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ತಲ್ವಾರ್ ದಂಪತಿಯನ್ನು ಆರೋಪಿಗಳು ಎಂದು ಹೆಸರಿಸಬೇಕು ಎಂದು ಸಿಬಿಐ ಮನವಿ ಸಲ್ಲಿಸಿತ್ತು. ಇದನ್ನು ಸ್ವೀಕರಿಸಿದ ನ್ಯಾಯಾಲಯ, ಪ್ರಕರಣ ಮುಚ್ಚಬೇಕೆಂಬ ಮನವಿಯನ್ನು ತಿರಸ್ಕರಿಸಿ, ಹೆತ್ತವರನ್ನೇ ಆರೋಪಿಗಳನ್ನಾಗಿ ಮಾಡಿ ಆದೇಶ ಹೊರಡಿಸಿತು.
'ಸಿಬಿಐ ವರದಿಯನ್ನು ನ್ಯಾಯಾಲಯವು ಅರಿವಿಗೆ ತೆಗೆದುಕೊಂಡಿದೆ. ಡಾ. ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರನ್ನು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿದ್ದು, ಅವರನ್ನು ಫೆಬ್ರವರಿ 28ರೊಳಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶ ನೀಡಲಾಗಿದೆ' ಎಂದು ಸಿಬಿಐ ವಕೀಲ ಆರ್.ಕೆ. ಸೈನಿ ತಿಳಿಸಿದ್ದಾರೆ.
ರಾಜೇಶ್ ತಲ್ವಾರ್ ಅವರನ್ನು ಪ್ರಕರಣದಲ್ಲಿ ಶಂಕಿತ ಆರೋಪಿ ಎಂದು ಹೆಸರಿಸಲಾಗಿತ್ತು. ಪ್ರಕರಣವನ್ನು ತಹಬದಿಗೆ ತರಲು ವಿಫಲವಾಗಿದ್ದ, ಯಾವುದೇ ಪ್ರಮುಖ ಸಾಕ್ಷ್ಯಗಳನ್ನು ಪತ್ತೆ ಮಾಡಲು ಸಾಧ್ಯವಾಗದ ಸಿಬಿಐ, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚುವಂತೆ ಕೋರಿ ಅಂತಿಮ ವರದಿ ಸಲ್ಲಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಧೀಶೆ ಪ್ರೀತಿ ಸಿಂಗ್, ದುಷ್ಕರ್ಮಿಗಳ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿದರು.
ನೂಪುರ್ ದಂಪತಿಗಳ ವಿರುದ್ಧ ನೀಡಿರುವ ಈ ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಅವರ ವಕೀಲ ರೆಬೆಕಾ ಜಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಆರುಷಿ ಮತ್ತು ಹೇಮರಾಜ್ ಹತ್ಯೆಯಲ್ಲಿ ರಾಜ್ ಕುಮಾರ್, ಕೃಷ್ಣ ಮತ್ತು ವಿಜಯ್ ಮಂಡಲ್ ಎಂಬ ಮೂವರು ಸಹಾಯಕರ ಮೇಲೆ ಶಂಕಿಸಲಾಗಿತ್ತು. ಆದರೆ ಈ ಮೂವರು ಕೃತ್ಯದಲ್ಲಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಆರುಷಿ ಹೆತ್ತವರಾದ ರಾಜೇಶ್ ಮತ್ತು ನೂಪುರ್ ಅವರ ಮೇಲೆಯೇ ಶಂಕೆಗಳಿವೆ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ಹೇಳಿತ್ತು.
14ರ ಹರೆಯದ ಬಾಲಕಿ ಆರುಷಿಯ ಕಳೇಬರ 2008ರ ಮೇ 16ರಂದು ದೆಹಲಿಯ ತನ್ನ ಹೆತ್ತವರ ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಮರುದಿನ ಮನೆ ಕೆಲಸದಾಳು ಹೇಮರಾಜ್ ಶವ ಕೂಡ ಅದೇ ಮನೆಯ ಮಹಡಿಯಲ್ಲಿ ಪತ್ತೆಯಾಗಿತ್ತು. ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗುತ್ತಿದೆಯಾದರೂ, ಇದುವರೆಗೆ ರುಜುವಾತು ಪಡಿಸಲು ಸಿಬಿಐಗೆ ಸಾಧ್ಯವಾಗಿಲ್ಲ.