ಇಸ್ರೋದಲ್ಲಿ ತಪ್ಪಾಗಿಲ್ಲ, ಹಗರಣ ಎಂದು ಕರೀಬೇಡಿ: ಕಾಂಗ್ರೆಸ್
ನವದೆಹಲಿ, ಗುರುವಾರ, 10 ಫೆಬ್ರವರಿ 2011( 11:44 IST )
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಒಂದರ ಮೇಲೊಂದು ಹಗರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವುದರ ನಡುವೆಯೇ ಇಸ್ರೋ ಎಸ್-ಬ್ಯಾಂಡ್ ಅವ್ಯವಹಾರ ಬೆಳಕಿಗೆ ಬಂದಿರುವುದರಿಂದ ತೀವ್ರ ಮುಜುಗರಕ್ಕೀಡಾಗಿರುವ ಆಡಳಿತ ಪಕ್ಷ, ಅದನ್ನು ಹಗರಣ ಎಂದು ಕರೆಯಬೇಡಿ ಎಂದು ಪ್ರತಿಪಕ್ಷಗಳಿಗೆ 'ಫರ್ಮಾನು' ಹೊರಡಿಸಿದೆ.
ಭಾರೀ ಮೌಲ್ಯ ಪಡೆದುಕೊಂಡ 3ಜಿ ತರಂಗಾಂತರ ಹರಾಜನ್ನು ಮುಂದಿಟ್ಟುಕೊಂಡು ಎಸ್-ಬ್ಯಾಂಡ್ ತರಂಗಾಂತರಕ್ಕೆ ಹೋಲಿಸಿ, ಅದರಲ್ಲಿ ಭಾರೀ ನಷ್ಟವಾಗಿದೆ ಎನ್ನುವುದು ಮತ್ತು ಅದನ್ನು ಹಗರಣ ಎಂದು ಕರೆಯುವುದು ಸರ್ವಥಾ ಸರಿಯಲ್ಲ. ಇಲ್ಲಿ ಸತ್ಯ ಬಯಲಾಗುವ ಅಗತ್ಯವಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.
'ಸೇಬು ಹಣ್ಣಿಗೆ ಸೀಬೇ ಕಾಯಿಯನ್ನು ಹೋಲಿಸಲಾಗುತ್ತಿದೆ' -- ಇದು ಬಿಜೆಪಿ ಮತ್ತು ಎಡಪಕ್ಷಗಳ ಆರೋಪವನ್ನು ತಿವಾರಿ ಲೇವಡಿ ಮಾಡಿರುವ ರೀತಿ. 3ಜಿ ತರಂಗಾಂತರ ಹರಾಜಾಗಿರುವ ದರದ ಪ್ರಕಾರವೇ 2ಜಿ ಪರವಾನಗಿಗಳು ಕೊಡಲ್ಪಡುತ್ತಿದ್ದರೆ ಪ್ರತಿ ನಿಮಿಷದ ಮೊಬೈಲ್ ಕರೆ ವೆಚ್ಚ 50 ರೂಪಾಯಿಗಳಾಗಿರುತ್ತಿದ್ದವು, ಇದನ್ನು ಅರ್ಥ ಮಾಡಿಕೊಳ್ಳಾದ ಅಗತ್ಯವಿದೆ ಎಂದು ವಿಪಕ್ಷಗಳಿಗೆ ಸಲಹೆ ನೀಡಿದರು.
2ಜಿ ತರಂಗಾಂತರದ್ದು 4.4 ಮೆಗಾಹರ್ಟ್ಸ್. ಇದನ್ನು ಹರಾಜು ನಡೆಸದೆ ಹಂಚಿಕೆ ನಡೆಸಿದ ಪರಿಣಾಮ 1.76 ಲಕ್ಷ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನೀಡಿತ್ತು. 3ಜಿ ತರಂಗಾಂತರ ಎಂದರೆ 50 ಮೆಗಾಹರ್ಟ್ಸ್. ಇದರ ಹರಾಜಿನಿಂದಾಗಿ 67,719 ಕೋಟಿ ರೂಪಾಯಿಗಳು ದೇಶದ ಬೊಕ್ಕಸಕ್ಕೆ ಸೇರಿತು. ಹಾಗಾದರೆ 70 ಮೆಗಾಹರ್ಟ್ಸ್ ಹೊಂದಿರುವ ಎಸ್-ಬ್ಯಾಂಡ್ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರವನ್ನು ಲೆಕ್ಕ ಹಾಕಿ ಎಂದು ಬಿಜೆಪಿಯು ಹೇಳಿತ್ತು.
ಈ ದುಬಾರಿ ತರಂಗಾಂತರದ (ಎಸ್-ಬ್ಯಾಂಡ್) ಸೇವೆಯನ್ನು ಪೊಲೀಸ್, ತುರ್ತು ಸೇವೆಗಳು, ಪ್ರಸಾರ ಮತ್ತು ಪವನಶಾಸ್ತ್ರ ಇಲಾಖೆಗಳು ತಮ್ಮ ಸೇವೆಗಳಿಗಾಗಿ ಬಳಸಿಕೊಳ್ಳುತ್ತವೆ ಎಂಬುದನ್ನು ಪ್ರತಿಪಕ್ಷಗಳು ಅರಿತುಕೊಳ್ಳಬೇಕು. ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಎಂದಿನಂತೆ ಸರಕಾರವನ್ನು ತಿವಾರಿ ಸಮರ್ಥಿಸಿಕೊಂಡರು.
ಪ್ರಧಾನ ಮಂತ್ರಿಯವರ ಕಚೇರಿಯ ಕಾರ್ಯವ್ಯಾಪ್ತಿಯಲ್ಲಿ ಬರುವ ಬಾಹ್ಯಾಕಾಶ ಇಲಾಖೆಗೆ ಸಂಬಂಧಪಟ್ಟ ಬೃಹತ್ ಅವ್ಯವಹಾರದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.