ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಕ್ಕೆ ಸುಪ್ರೀಂ ಗಡುವು; ಹಳೆ ಅದಿರು ರಫ್ತಿಗೆ ಸಮ್ಮತಿ (Supreme Court | Iron ore export | Karnataka | BJP govt)
ಎರಡು ವಾರಗಳೊಳಗೆ ನೂತನ ಅದಿರು ನೀತಿಯನ್ನು ಜಾರಿಗೆ ತರಬೇಕು ಎಂದು ನೀಡಿದ್ದ ಗಡುವನ್ನು ಕರ್ನಾಟಕದ ಬಿಜೆಪಿ ಸರಕಾರವು ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಅಂತಿಮ ಗಡುವನ್ನು ನೀಡಿದೆ. ಅಲ್ಲದೆ, ದೊಡ್ಡ ಬಂದರುಗಳಲ್ಲಿ ಸಂಗ್ರಹಿಸಲಾಗಿರುವ ಅದಿರು ರಫ್ತಿನ ಮೇಲೆ ಸರಕಾರದ ನಿಷೇಧ ಅನ್ವಯವಾಗುವುದಿಲ್ಲ ಎಂದು ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರಕಾರವು ಕಳೆದ ವರ್ಷ ಅದಿರು ರಫ್ತು ನಿಷೇಧಿಸಿ ಹೊರಡಿಸಿರುವ ಆದೇಶ ತೂಗುಯ್ಯಾಲೆಯಲ್ಲಿದೆ. ಮುಂದಿನ ಗಡುವಿನ ಒಳಗೆ ನೂತನ ಮಸೂದೆಯನ್ನು ಸರಕಾರ ಜಾರಿಗೆ ತರದೇ ಇದ್ದರೆ, ನೇರವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅದಿರು ರಫ್ತು ನಿಷೇಧವನ್ನು ತೆರವು ಮಾಡುವ ಸಾಧ್ಯತೆಗಳಿವೆ.

ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, 2010ರ ಜುಲೈ 26ರವರೆಗೆ ರಾಜ್ಯದ ದೊಡ್ಡ ಬಂದರುಗಳಲ್ಲಿ ಸಂಗ್ರಹಿಸಲಾಗಿರುವ ಅದಿರಿನ ರಫ್ತಿಗೆ ಸರಕಾರದ ನಿಷೇಧ ಅನ್ವಯವಾಗುವುದಿಲ್ಲ. ಆ ಅದಿರನ್ನು ರಫ್ತು ಮಾಡಬಹುದು ಎಂದು ಮಹತ್ವದ ಆದೇಶ ಹೊರಡಿಸಿದೆ.

ಸರಕಾರಕ್ಕೆ ಅಂತಿಮ ಗಡುವು...
ಅದಿರು ರಫ್ತು ನಿಷೇಧ ಶಾಶ್ವತವಾಗಿರಲು ಸಾಧ್ಯವಿಲ್ಲ. ಈ ಸಂಬಂಧ ನೂತನ ನೀತಿಗಳನ್ನು ಸರಕಾರ ಪ್ರಕಟಿಸಬೇಕು. ಅಕ್ರಮ ಗಣಿಗಾರಿಕೆ ತಡೆಯಲು ನಿಯಮಾವಳಿಗಳನ್ನು ರೂಪಿಸಬೇಕು. ಇಲ್ಲದೇ ಇದ್ದರೆ, ಅದಿರು ರಫ್ತಿಗೆ ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಈ ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತ್ತು.

ಆದರೆ ಸರಕಾರವು ಇದುವರೆಗೆ ಯಾವುದೇ ಹೊಸ ನೀತಿಗಳನ್ನು ಪ್ರಕಟಿಸಿಲ್ಲ. ಹಾಗಾಗಿ, ಇನ್ನೊಂದು ಗಡುವನ್ನು ಸುಪ್ರೀಂ ಕೋರ್ಟ್ ಒದಗಿಸಿದೆ. ಮಾರ್ಚ್ 31ರೊಳಗೆ ಅದಿರು ಸಾಗಾಟ, ಅಕ್ರಮ ಗಣಿಗಾರಿಕೆ ಕುರಿತು ನೂತನ ನಿಯಮಾವಳಿ, ಕಾನೂನನ್ನು ಜಾರಿಗೆ ತರಬೇಕು ಎಂದಿದೆ.

ಹಾಗೊಂದು ವೇಳೆ ಸರಕಾರವು ಮತ್ತೆ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದ್ದರೆ, ಮಧ್ಯಂತರ ಆದೇಶಕ್ಕಾಗಿ ಅರ್ಜಿದಾರರು ಮನವಿ ಮಾಡಿಕೊಳ್ಳಬಹುದು ಎಂದು ತಿಳಿಸಿದ ದ್ವಿಸದಸ್ಯ ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ನಿಗದಿ ಪಡಿಸಿದೆ.

ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿರುವ ಅದಿರು ರಫ್ತಿಗೆ ಸರಕಾರವು ಈ ಹಿಂದಿನ ವಿಚಾರಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಅಕ್ರಮವಾಗಿ ತೆಗೆದಿರುವ ಅದಿರಾಗಿರಬಹುದು ಎಂದು ಸಂಶಯಪಟ್ಟಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಸುಪ್ರೀಂ, ನೀವು ತಕ್ಷಣ ಕಾರ್ಯಪ್ರವೃತ್ತರಾಗದೇ ಇದ್ದರೆ, ನಾವು ವಿಶೇಷ ಅನುಮತಿ ನೀಡಬೇಕಾಗುತ್ತದೆ ಎಂದು ಹೇಳಿತ್ತು.
ಇವನ್ನೂ ಓದಿ