ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮಗಿದು ಗೊತ್ತೇ?: ಮುಬಾರಕ್‌ಗೆ 25 ಲಕ್ಷ ರೂ. ನೆಹರು ಪ್ರಶಸ್ತಿ! (Hosni Mubarak | Egypt | Nehru Peace Award | Pratibha Patil | India)
PTI
ವಂಶಾಡಳಿತ ಮತ್ತು ಸರ್ವಾಧಿಕಾರಿ ಧೋರಣೆಯಿಂದಾಗಿ ದಂಗೆ ಎದ್ದ ಜನರಿಗೆ ಹೆದರಿ ಕೊನೆಗೂ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿ ಈಜಿಪ್ಟ್‌ನಿಂದಲೇ ಪರಾರಿಯಾಗಿರುವ ಹೋಸ್ನಿ ಮುಬಾರಕ್‌ಗೆ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರಕಾರದಿಂದ ನೆಹರೂ 'ಶಾಂತಿ' ಪ್ರಶಸ್ತಿ ದೊರೆತಿತ್ತು ಎಂಬುದು ನೆನಪಿದೆಯೇ?

2008ರ ನವೆಂಬರ್ 11ರಂದು ದೆಹಲಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಸಂಪುಟ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು "ತಮ್ಮ ದೇಶದಲ್ಲಿ ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸಿದ್ದಕ್ಕಾಗಿ, ಅರಬ್ ಜನರ ಆಕಾಂಕ್ಷೆಗಳನ್ನು ಎತ್ತಿ ಹಿಡಿದದ್ದಕ್ಕಾಗಿ, ಪ್ರದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರೇರೇಪಿಸಿದ್ದಕ್ಕಾಗಿ" ಮುಬಾರಕ್‌ಗೆ ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.

1965ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಭಾರತ ಸರಕಾರವು ಪ್ರತಿ ವರ್ಷ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಮೂಲಕ ಕೊಡಮಾಡುತ್ತಿದ್ದು, ಮದರ್ ತೆರೆಸಾ, ಕೆನೆತ್ ಕೌಂಡಾ, ನೆಲ್ಸನ್ ಮಂಡೇಲಾ, ಯಾಸಿರ್ ಅರಾಫತ್, ಖಾನ್ ಅಬ್ದುಲ್ ಗಫರ್ ಖಾನ್, ಇಂದಿರಾ ಗಾಂಧಿ, ಮಹಾತಿರ್ ಮೊಹಮದ್ ಮುಂತಾದವರಿಗೆ ನೀಡಲಾಗಿದೆ.

ಈ ಪ್ರಶಸ್ತಿಯು ಭಾರತ ಸರಕಾರದ ಖಜಾನೆಯಿಂದ ಕೊಡಲಾಗುವ 25 ಲಕ್ಷ ರೂಪಾಯಿ ನಗದು ಹಣ ಮತ್ತು ಒಂದು ಸನ್ಮಾನ ಫಲಕವನ್ನು ಒಳಗೊಂಡಿತ್ತು! ಈ ಪ್ರಶಸ್ತಿ ಸ್ವೀಕರಿಸಿದ್ದ ಮುಬಾರಕ್ ಅಂದು ಏನು ಹೇಳಿದ್ದರು ಗೊತ್ತೇ? "ಈ ಮಹಾನ್ ನಾಯಕನ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದು ಬಲು ದೊಡ್ಡ ಗೌರವ. ಪ್ರಶಸ್ತಿಯ ಮೌಲ್ಯ, ಮಹತ್ವ ಮತ್ತು ಅರ್ಥಕ್ಕೆ ಕುಂದು ತಾರದಂತೆ ಯಾವತ್ತಿಗೂ ಕಾರ್ಯ ನಿರ್ವಹಿಸುತ್ತೇನೆ"!

ಅನ್ವರ್ ಅಲ್ ಸಾದತ್ ಹತ್ಯಾ ನಂತರ 1981ರ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷ ಪಟ್ಟವೇರಿದ್ದ ಹೋಸ್ನಿ ಮುಬಾರಕ್, ನಿರಂಕುಶ ಅಧಿಕಾರ ಚಲಾಯಿಸುತ್ತಲೇ, ಇದುವರೆಗಿನ ಎಲ್ಲ ಪ್ರತಿಭಟನೆಗಳನ್ನು ಜಾಣತನದಿಂದ ಮೆಟ್ಟಿ ನಿಂತರಾದರೂ, ಕಳೆದ ಜನವರಿ 25ರಿಂದ ಆರಂಭವಾಗಿದ್ದ ಪ್ರತಿಭಟನೆಯ ಕಾವನ್ನು ತಣಿಸುವುದು ಅವರಿಗೆ ಸಾಧ್ಯವಾಗಲೇ ಇಲ್ಲ.

ಜಾಗತಿಕ ಹಣಕಾಸು ಸಮಗ್ರತೆ (ಜಿಎಫ್ಐ) ವರದಿಯೊಂದು ಇತ್ತೀಚೆಗೆ, ಈಜಿಪ್ಟ್‌ನಲ್ಲಿ ಭಾರೀ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ದೇಶಕ್ಕೆ ಪ್ರತೀ ವರ್ಷ 600 ಕೋಟಿ ಡಾಲರ್ ನಷ್ಟವಾಗುತ್ತಿದೆ ಎಂದು ಹೇಳಿತ್ತು. 2000ದಿಂದ 2008ರ 8 ವರ್ಷಗಳ ಅವಧಿಯಲ್ಲಿ ದೇಶಕ್ಕೆ 5720 ಕೋಟಿ ಡಾಲರ್ ನಷ್ಟವಾಗಿದೆ ಎಂದಿತ್ತು ಈ ವರದಿ.

ಕಳೆದ 30 ವರ್ಷಗಳಿಂದ ಈಜಿಪ್ಟ್ ಅನ್ನು ಆಳುತ್ತಿದ್ದ ಮುಬಾರಕ್, ಇದೀಗ ಸರ್ವಾಧಿಕಾರಿಯಾಗಿ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಮಾತ್ರವಲ್ಲದೆ, ತಮ್ಮ ಮಗನನ್ನೂ ತನ್ನ ನಂತರ ಅಧ್ಯಕ್ಷ ಪಟ್ಟದಲ್ಲಿ ಕೂರಿಸುವ ಇರಾದೆಯಲ್ಲಿದ್ದರು. ತಮ್ಮ ಪದಚ್ಯುತಿಗಾಗಿ ನಾಗರಿಕ ಕ್ಷಿಪ್ರ ಕ್ರಾಂತಿಯು ತೀವ್ರಗೊಂಡಾಗಲೂ, ಸೆಪ್ಟೆಂಬರ್ ತಿಂಗಳವರೆಗೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದರು. ಭಾರತದಲ್ಲಿಯೂ ಕಾಂಗ್ರೆಸ್ ಪಾಳಯದ ನೆಹರು-ಗಾಂಧಿ ವಂಶಾಡಳಿತವು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗುತ್ತಿರುವುದು ಇಲ್ಲಿ ಸ್ಮರಣಾರ್ಹ. ಇದೀಗ ಭಾರತ ಸರಕಾರವು ವಂಶಾಡಳಿತ ಪ್ರತಿಪಾದಕ, ಸರ್ವಾಧಿಕಾರಿ ಎಂಬ ಆರೋಪಕ್ಕೆ ಗುರಿಯಾಗಿರುವ ಮುಬಾರಕ್‌ಗೆ 25 ಲಕ್ಷ ರೂ.ಗಳ ಪ್ರಶಸ್ತಿ ನೀಡಿರುವುದು ಕೂಡ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇವನ್ನೂ ಓದಿ