ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿನ 2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತು ತಾನು ಸಭೆಯೊಂದರಲ್ಲಿ ಬಿಜೆಪಿಯ ಹಿರಿಯ ನಾಯಕರ ಗಮನ ಸೆಳೆಯಲು ಯತ್ನಿಸಿದ್ದೆ. ಆದರೆ 'ಸ್ಥಾಪಿತ ಹಿತಾಸಕ್ತಿ'ಗಳ ಕಾರಣದಿಂದಾಗಿ ಅದು ಮಹತ್ವ ಪಡೆದಿರಲಿಲ್ಲ ಎಂದು ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ. ಇದನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಇದರೊಂದಿಗೆ ಪರಸ್ಪರ ಗುದ್ದಾಟಕ್ಕೆ ಅಧಿಕೃತ ಚಾಲನೆ ಸಿಕ್ಕಿದಂತಾಗಿದೆ.
2ಜಿ ತರಂಗಾಂತರ ಹಂಚಿಕೆ ಹಗರಣ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಎನ್‌ಡಿಎ ಸರಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ಅರುಣ್ ಶೌರಿಯವರು ಬಿಜೆಪಿಯಿಂದ ಸೈದ್ಧಾಂತಿಕ ಅಂತರವನ್ನು ಕಾಪಾಡಿಕೊಂಡು ಬಂದಿದ್ದು, ಬಿಜೆಪಿ ನಾಯಕರ ವಿರುದ್ಧ ಹಲವು ಬಾರಿ ಪರೋಕ್ಷ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಈ ಬಾರಿ ಅದು ಕೊಂಚ ಪ್ರಭಾವಯುತವಾಗಿರುವಂತೆ ಕಂಡು ಬಂದಿದೆ.
ಶೌರಿ ಹೇಳಿದ್ದೇನು? ಕೆಲವು ಖಾಸಗಿ ಕಂಪನಿಗಳಿಗೆ ಅಗ್ಗದ ದರದಲ್ಲಿ ದುಬಾರಿ ತರಂಗಾಂತರಗಳನ್ನು ಹಂಚಿಕೆ ಮಾಡಿದ ದೂರಸಂಪರ್ಕ ಸಚಿವಾಲಯದ ಮಾಜಿ ಸಚಿವ ಎ. ರಾಜಾ ಹಗರಣದ ಕುರಿತು ತಾನು ಬಿಜೆಪಿ ನಾಯಕರ ಗಮನ ಸೆಳೆಯಲು ಯತ್ನಿಸಿದ್ದೆ. ಆ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು. ಆದರೆ ನನ್ನ ಮಾತನ್ನು ನಿರ್ಲಕ್ಷಿಸಲಾಯಿತು ಎಂದು ಶೌರಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಗರಣವನ್ನು ಮುಚ್ಚಿ ಹಾಕಿದ್ದು ಮಾತ್ರವಲ್ಲ, ಅವರು ಪಾಲ್ಗೊಂಡಿದ್ದಾರೆ ಎಂಬ ಆರೋಪವನ್ನೂ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಮಾಡುತ್ತಿದ್ದಾರೆ. ಪ್ರಧಾನಿ ಹಗರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಆರೋಪ ಮಾಡುವಷ್ಟು ನಿಮ್ಮಲ್ಲಿ ಪುರಾವೆಗಳಿದ್ದವು. ಆದರೆ ನೀವದನ್ನು ಬಹಿರಂಗ ಮಾಡಲಿಲ್ಲ ಎಂದು ಮಾಧ್ಯಮವೊಂದು ಪ್ರಶ್ನಿಸಿದ್ದಕ್ಕೆ, 'ನನಗೇನು ಗೊತ್ತು ಎನ್ನುವುದು ಬಿಜೆಪಿಗೂ ಗೊತ್ತು' ಎಂದು ಅಸ್ಪಷ್ಟ ಉತ್ತರ ನೀಡಿದ್ದರು.
ನಿಮಗೆ ಗೊತ್ತಿರುವುದು ಬಿಜೆಪಿಗೆ ಗೊತ್ತಿದೆ ಎಂದರೆ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಗೂ ಇದು ಗೊತ್ತೇ ಎಂಬ ಪ್ರಶ್ನೆಗೆ, 'ಬಿಜೆಪಿಯ ಆಂತರಿಕ ಸಭೆಯ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ. ಆದರೆ ಒಂದಂತೂ ಸ್ಪಷ್ಟ. ಹಗರಣದ ಕುರಿತು ನಾನು ಪ್ರಸ್ತಾಪ ಮಾಡಿದಾಗ, ಅವರು ಆಸಕ್ತಿ ತೋರಿಸಿರಲಿಲ್ಲ. ಬಿಜೆಪಿಗೆ ಈ ಕುರಿತು ಆಸಕ್ತಿ ಇರಲಿಲ್ಲ' ಎಂದು ಹೇಳಿದ್ದರು.
ಶೌರಿ ಆರೋಪ ನಿರಾಕರಣೆ... ಹಗರಣ ಗೊತ್ತಿದ್ದರೂ ಬಿಜೆಪಿ ಸುಮ್ಮನಿತ್ತು ಎಂಬ ಶೌರಿ ಗಂಭೀರ ಆರೋಪದಿಂದ ಮುಖ ಮುಚ್ಚಿಕೊಳ್ಳಲು ತಕ್ಷಣವೇ ವೇದಿಕೆಗೆ ಬಂದಿರುವ ಅದರ ವಕ್ತಾರ ರವಿಶಂಕರ್ ಪ್ರಸಾದ್, ಬಿಜೆಪಿಯು ಹಗರಣದ ಸಂಬಂಧ ಸಂಸತ್ತಿನ ಬೀದಿಗಳಲ್ಲಿ ಹೋರಾಟ ನಡೆಸಿದೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಕಳೆದ ಎರಡು ವರ್ಷಗಳಿಂದ ಧ್ವನಿಯೆತ್ತುತ್ತಿದ್ದೇವೆ. ನಮ್ಮ ನಾಯಕರು ಈ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದಾರೆ ಎಂದಿದ್ದಾರೆ.
ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರೇ 2ಜಿ ಹಗರಣದ ಕುರಿತು ಮೊದಲು 2009ರಲ್ಲಿ ಪ್ರಸ್ತಾಪ ನಡೆಸಿ, ಹೋರಾಟ ಆರಂಭಿಸಿದ್ದರು. ಸಂಸತ್ತಿನಲ್ಲಿ ಮತ್ತು ಹೊರಗಡೆ ಬಿಜೆಪಿ ಈ ಕುರಿತು ಸಾಕಷ್ಟು ಪ್ರತಿಭಟನೆ-ಮುಷ್ಕರಗಳನ್ನು ನಡೆಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ನಾವು ಜನಜಾಗೃತಿ ಮೂಡಿಸಲು ಯತ್ನಿಸಿದ್ದೇವೆ ಎಂದು ಪ್ರಸಾದ್ ಸ್ಪಷ್ಟನೆ ನೀಡಿದರು.
ತನ್ನ ಸಂದರ್ಶನದಲ್ಲಿ ಶೌರಿಯವರು ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅಥವಾ ಎಲ್.ಕೆ. ಆಡ್ವಾಣಿಯವರ ಹೆಸರನ್ನು ಪ್ರಸ್ತಾಪಿಸಿಲ್ಲವಾದರೂ, ಪಕ್ಷದ ಮೂಲಗಳ ಪ್ರಕಾರ ಸಭೆಯಲ್ಲಿ ಮಾಜಿ ಸಚಿವರು ಹಗರಣದ ಕುರಿತು ಗಮನ ಸೆಳೆಯಲು ಯತ್ನಿಸಿದ್ದು ಹಿರಿಯ ನಾಯಕರಿಗೆ ನೆನಪಿಲ್ಲವಂತೆ!