ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರಿಗೂ ಕ್ರೈಸ್ತರ ಮತಾಂತರ ಬಾಧೆ; ಉಗ್ರರ ಕೆಂಗಣ್ಣು? (Sopore girls | Christian | Kerala evangelist | Kashmir)
ಕ್ರೈಸ್ತ ಧರ್ಮದ ಮೇಲೆ ಮತಾಂತರದ ಆರೋಪ ಬರುತ್ತಿರುವುದು ಹೊಸತೇನಲ್ಲ. ಇದುವರೆಗೆ ಇದು ಹಿಂದೂ ಮತ್ತಿತರ ಧರ್ಮಗಳಿಂದ ಹೆಚ್ಚಾಗಿ ಬರುತ್ತಿತ್ತು. ಆದರೆ ಮುಸ್ಲಿಂ ಧರ್ಮೀಯರಲ್ಲೂ ಕ್ರಿಶ್ಚಿಯಾನಿಟಿಯನ್ನು ಬೆಳೆಸುವ ಕಾರ್ಯಗಳು ನಡೆಯುತ್ತಿವೆ ಎನ್ನುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಕ್ರೈಸ್ತ ಧರ್ಮಗುರುವೊಬ್ಬರು ಇದನ್ನು ಸ್ವತಃ ಒಪ್ಪಿಕೊಂಡಿದ್ದಾರೆ.

ಈಗ ಈ ವಿಚಾರ ಭಾರೀ ಮಹತ್ವ ಪಡೆದುಕೊಳ್ಳಲು ಕಾರಣ ಇತ್ತೀಚೆಗಷ್ಟೇ ಇಬ್ಬರು ಮುಸ್ಲಿಂ ಯುವತಿಯರನ್ನು ಉಗ್ರರು ಕೊಂದು ಹಾಕಿರುವುದು. ಘಟನೆ ನಡೆದಿರುವುದು ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೊಪೊರ್ ಎಂಬಲ್ಲಿ. ಕಾರಣ- ಅವರು ಕ್ರೈಸ್ತ ಧರ್ಮೀಯರ ಜತೆ ಆಪ್ತರಾಗಿದ್ದ ಅಥವಾ ಭಾಗಶಃ ಮತಾಂತರ ಹೊಂದಿದ್ದರು ಎನ್ನುವ ಆರೋಪಗಳು.

ಸೇಲಂ ವಾಯ್ಸ್ ಮಿನಿಸ್ಟರೀಸ್ ನಿರ್ದೇಶಕ, ಕ್ರೈಸ್ತ ಧರ್ಮಗುರು, ಮತ ಪ್ರಚಾರಕ ಪೌಲ್ ಸಿನಿರಾಜ್ ಮೊಹಮ್ಮದ್ ಎಂಬವರೇ ಈ ಕುರಿತು ಮೊದಲ ಬಾರಿ ದನಿಯೆತ್ತಿರುವುದು. ಹುಡುಗಿಯರಿಬ್ಬರು ಕ್ರೈಸ್ತರ ಜತೆ ಆಪ್ತವಾಗಿರುವುದನ್ನೇ ಮುಂದಿಟ್ಟುಕೊಂಡ ಉಗ್ರರು ಅವರನ್ನು ಕೊಂದು ಹಾಕಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಆ ಹುಡುಗಿಯರು ಮತಾಂತರಗೊಂಡಿರಲಿಲ್ಲ. ಅವರು ಬೈಬಲ್‌ನ ಹೊಸ ಒಡಂಬಡಿಕೆಯನ್ನು ಓದಲು ಆರಂಭಿಸಿದ್ದರು. ಈ ರೀತಿ ಹಲವು ಹುಡುಗಿಯರು ತೊಡಗಿಸಿಕೊಂಡಿರುವುದು ಉಗ್ರರ ಗಮನಕ್ಕೆ ಬಂದಿರಬಹುದು. ಅದೇ ಕಾರಣದಿಂದ ಹೀಗಾಗಿರಬಹುದು ಎನ್ನುತ್ತಾರೆ ಪೌಲ್.

ಹೀಗೆಲ್ಲ ಹೇಳುತ್ತಿರುವ ಪೌಲ್ ಮುಖತಃ ಹುಡುಗಿಯರನ್ನು ನೋಡಿದವರಲ್ಲ. ಅಷ್ಟಕ್ಕೂ ಅವರು ಸೊಪೊರಿಗೆ ಕೊನೆಯ ಬಾರಿ ಹೋಗಿರುವುದು 20 ವರ್ಷಗಳ ಹಿಂದೆ. ಆದರೂ ಅವರಿಗೆ ಅಲ್ಲಿಂದ ಮಾಹಿತಿಗಳು ಬರುತ್ತಿವೆ.

'ಫೆಬ್ರವರಿ 2ರಂದು ನನಗೆ ಕೆಲವರಿಂದ ದೂರವಾಣಿ ಕರೆಗಳು ಬಂದವು. ಸಾವನ್ನಪ್ಪಿದ ಇಬ್ಬರು ಹುಡುಗಿಯರಿಗಾಗಿ ಪ್ರಾರ್ಥನೆ ಮಾಡುವಂತೆ ಅವರು ಮನವಿ ಮಾಡಿಕೊಂಡರು. ಆ ಹುಡುಗಿಯರು ಬಲಿಯಾದ ಪ್ರದೇಶದಲ್ಲಿನ ಹಲವು ಮುಸ್ಲಿಂ ಕುಟುಂಬಗಳು ಕ್ರಿಸ್ತನಲ್ಲಿ, ಆತನ ಸುವಾರ್ತೆಯಲ್ಲಿ ನಂಬಿಕೆ ಇಟ್ಟಿವೆ. ಆ ಹುಡುಗಿಯರಿಗೆ ಬೈಬಲ್ ಮತ್ತು ಇತರ ಸಾಹಿತ್ಯಗಳನ್ನು ಒದಗಿಸಲಾಗಿತ್ತು. ಆದರೆ ಅವರು ಮುಸ್ಲಿಮರಾಗಿಯೇ ಉಳಿದುಕೊಂಡಿದ್ದರು ಎಂದು ನನಗೆ ಮಾಹಿತಿ ನೀಡಿದರು' ಎಂದು ವಿವರಿಸಿದರು.

ಇದೇ ವರ್ಷದ ಜನವರಿ 31ರಂದು ಅಖ್ತಾರಾ (19) ಮತ್ತು ಆಕೆಯ ಸಹೋದರಿ ಆರಿಫಾ (17) ಎಂಬಾಕೆಯನ್ನು ಶಂಕಿತ ಉಗ್ರರು ಕೊಂದು ಹಾಕಿದ್ದರು. ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆಳೆದು ಅವರನ್ನು ಕೊಲ್ಲಲಾಗಿತ್ತು.

35 ವರ್ಷಗಳ ಇಸ್ಲಾಂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಪೌಲ್ ಸಿನಿರಾಜ್ ಮೊಹಮ್ಮದ್ ಅವರ ಪ್ರಕಾರ, ಉಗ್ರರ ಗುಂಡಿಗೆ ಬಲಿಯಾದ ಸೊಪೊರ್ ಹುಡುಗಿಯರು ತೀರಾ ಬಡವರು. ಅವರ ತಂದೆ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆಣ್ಮಕ್ಕಳು ಮನೆಯಲ್ಲೇ ಎಂಬ್ರಾಯಿಡರಿ ಕೆಲಸ ಮಾಡುತ್ತಿದ್ದರು. ಅದೇ ಕಾರಣದಿಂದ ಕೆಲವು ಕ್ರೈಸ್ತರ ಜತೆ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಅವರಿಗೆ ನೀಡಲಾಗಿತ್ತು.

ಆದರೆ ಯುವತಿಯರು ಬಲಿಯಾದ ಸೊಪೊರ್ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮತ ಪ್ರಚಾರ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ಪೌಲ್ ನಿರಾಕರಿಸಿದ್ದಾರೆ. ಬೈಬಲ್ ಅನುಯಾಯಿಗಳು ಅಲ್ಲಿರುವುದು ಕೆಲವೇ ಕೆಲವು ಮಂದಿ ಮಾತ್ರ. ಅವರು ಕೂಡ ಭೀತಿಯಿಂದಾಗಿ ಅದನ್ನು ಪ್ರಕಟಗೊಳಿಸುತ್ತಿಲ್ಲವಂತೆ.

ಏನಿದು ಸೇಲಂ ವಾಯ್ಸ್ ಮಿನಿಸ್ಟರೀಸ್?
ಮುಸ್ಲಿಮರ ಮನಸ್ಸಿನಲ್ಲಿ ಕ್ರೈಸ್ತ ಧರ್ಮದತ್ತ ಆಸಕ್ತಿ ಹುಟ್ಟಿಸಲು ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯೇ 'ಸೇಲಂ ವಾಯ್ಸ್ ಮಿನಿಸ್ಟರೀಸ್'. ಈ ಗುಂಪಿನಲ್ಲಿನ ನಾಲ್ಕೈದು ಮಂದಿ ಮಾತ್ರ ಇದುವರೆಗೆ ಮತಾಂತರ ಹೊಂದಿದ್ದಾರೆ. ಉಳಿದವರು ಮುಸ್ಲಿಂರಾಗಿದ್ದುಕೊಂಡೇ ಕ್ರೈಸ್ತ ಧರ್ಮವನ್ನೂ ಅನುಸರಿಸುತ್ತಿದ್ದಾರೆ.

ಕೇರಳ ಮೂಲದ ಧರ್ಮಗುರುವೊಬ್ಬರು ಜಮ್ಮು-ಕಾಶ್ಮೀರದ ಸೊಪೊರೆ ಜಿಲ್ಲೆಯಲ್ಲಿ ಈ ಕೆಲಸವನ್ನು ರಹಸ್ಯವಾಗಿ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಕ್ರೈಸ್ತ ಧರ್ಮದತ್ತ ಒಲವು ತೋರಿಸುವ ಯತ್ನವನ್ನು ಮುಂದುವರಿಸುತ್ತಿದ್ದಾರೆ.

ಸೊಪೊರ್ ಜಿಲ್ಲೆಯಲ್ಲಿನ ಬಹುತೇಕ ಹುಡುಗಿಯರು ಅನಕ್ಷರಸ್ಥರು. ಅವರಿಗೆ ಕ್ರೈಸ್ತರ ಈ ಸಂಘಟನೆಯು ಬೈಬಲ್ ಓದಲು ಸಾಧ್ಯವಾಗುವುದರ ಮಟ್ಟಿಗಿನ ಮೂಲ ಶಿಕ್ಷಣವನ್ನು ಕೊಟ್ಟಿದೆ, ಕೊಡುತ್ತಿದೆ. ಇದನ್ನು ಸ್ವತಃ ಪೌಲ್ ಒಪ್ಪಿಕೊಂಡಿದ್ದಾರೆ.
ಇವನ್ನೂ ಓದಿ