ತಿರುವನಂತಪುರಂ, ಮಂಗಳವಾರ, 15 ಫೆಬ್ರವರಿ 2011( 13:40 IST )
ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತಿರುವ ಹೊತ್ತಿನಲ್ಲೇ, ಕೇರಳದ 21 ಬಾರುಗಳ ಪರವಾನಗಿ ನಿಷೇಧವನ್ನು ತೆರವುಗೊಳಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರಿಗೆ 1994ರಲ್ಲಿ 36 ಲಕ್ಷ ಲಂಚ ನೀಡಲಾಗಿತ್ತು ಎಂದು ಕೇಳಿ ಬಂದಿರುವ ಆರೋಪವಿದು.
ಆರೋಪ ಮಾಡಿರುವುದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇರಳದ ಕಣ್ಣೂರು ಸಂಸದ ಕೆ. ಸುಧಾಕರನ್. ಈ ಬಗ್ಗೆ ನನ್ನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ, ಆದರೆ ನ್ಯಾಯಾಲಯವು ಬಯಸಿದಲ್ಲಿ ಆ ಕಳಂಕಿತ ನ್ಯಾಯಮೂರ್ತಿಯ ಹೆಸರು ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಲು ತಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಂಸದನ ಆಪಾದನೆ ನ್ಯಾಯಾಂಗದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಹಲವು ನ್ಯಾಯಮೂರ್ತಿಗಳು ಇದು ಸುಳ್ಳು ಆರೋಪ ಎಂದು ಹೇಳಿದ್ದರೆ, ಸ್ವತಃ ಕಾಂಗ್ರೆಸ್ ಹೇಳಿಕೆಯಿಂದ ದೂರಕ್ಕೆ ಸರಿದಿದೆ. ಈ ನಡುವೆ ಸಂಸದನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೇರಳ ಗೃಹಸಚಿವ ಕೊಡೆಯೇರಿ ಬಾಲಕೃಷ್ಣನ್ ಪ್ರಕಟಿಸಿದ್ದಾರೆ.
ಆರೋಪಕ್ಕೆ ಭಾರೀ ಟೀಕೆ-ಸ್ವಾಗತಗಳು ವ್ಯಕ್ತವಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು. ವಿಚಾರಣೆ ನಡೆಸಿ, ಯಾರು ತಪ್ಪಿತಸ್ಥರು ಎಂಬುದನ್ನು ಪತ್ತೆ ಹಚ್ಚಬೇಕು. ಆರೋಪದಲ್ಲಿ ಹುರುಳಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ರಾಜಕೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಸಂಸದನ ಆರೋಪದ ವಿವರ.. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಒಂದು ವರ್ಷ ಜೈಲು ಶಿಕ್ಷೆ ಪಡೆದುಕೊಂಡಿದ್ದ ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಬಿ. ಬಾಲಕೃಷ್ಣನ್ ಪಿಳ್ಳೈ ಅವರಿಗೆ ಕೊಟ್ಟಾರಕ್ಕರ ಎಂಬಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಂಸದ ಸುಧಾಕರನ್ ಮಾಡಿರುವ ಆರೋಪ ಅವರ ಮಾತುಗಳಲ್ಲೇ ಇದೆ--
WD
'ನ್ಯಾಯಾಧೀಶರಿಗೆ ಲಂಚ ಕೊಟ್ಟಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. 1994ರಲ್ಲಿ ನವದೆಹಲಿಯ ಕೇರಳ ಭವನದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಲಂಚ ನೀಡಲಾಗಿತ್ತು. ಒಟ್ಟು ಎರಡು ಕಂತುಗಳಲ್ಲಿ 36 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು'
'ಕೆ. ಕರುಣಾಕರನ್ ನೇತೃತ್ವದ ಅಂದಿನ ಕಾಂಗ್ರೆಸ್ ಸರಕಾರವು ನೀಡಿದ್ದ 21 ಬಾರ್ ಪರವಾನಗಿಗಳನ್ನು ಕೇರಳ ಹೈಕೋರ್ಟ್ ರದ್ದು ಮಾಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದು ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಹೊತ್ತಿನಲ್ಲಿ ನ್ಯಾಯಾಧೀಶರು ಲಂಚದ ಬೇಡಿಕೆ ಮುಂದಿಟ್ಟಿದ್ದರು'
'ಅವರಿಗೆ ಮೊದಲ ಕಂತಿನಲ್ಲಿ 21 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಲಾಯಿತು. ನಂತರ ಮಧ್ಯವರ್ತಿಯೊಬ್ಬನನ್ನು ಕಳುಹಿಸಿದ್ದ ಅವರು, ಬಾರುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಭರವಸೆಯೊಂದಿಗೆ ಇನ್ನಷ್ಟು ಹಣದ ಬೇಡಿಕೆಯಿಟ್ಟಿದ್ದರು. ಬಳಿಕ ಅವರಿಗೆ ಮತ್ತೆ 15 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಲಾಯಿತು'
'ನ್ಯಾಯಾಲಯದ ಮೇಲೆ ನನಗೆ ಅಪಾರ ಗೌರವವಿದ್ದ ಕಾರಣದಿಂದ ನಾನು ಇದನ್ನು ಇದುವರೆಗೆ ಬಹಿರಂಗ ಮಾಡಿರಲಿಲ್ಲ. ನ್ಯಾಯಾಧೀಶರೆಂದರೆ ಪ್ರಾಮಾಣಿಕರು, ಕಾನೂನುಗಳತ್ತ ಗೌರವ ಹೊಂದಿರುವವರು, ದಕ್ಷರು ಮತ್ತು ಸಾಮಾಜಿಕ ವ್ಯವಸ್ಥೆಯ ಗೌರವಾನ್ವಿತರು ಎಂಬ ಕಾರಣಕ್ಕಲ್ಲ'
'ನಾನು ಹೇಳುತ್ತಿರುವುದು ಸತ್ಯ. ಈ ಪ್ರಸಂಗ ನಡೆಯುವಾಗ ನಾನು ದೆಹಲಿಯಲ್ಲೇ ಇದ್ದೆ. ನಾನು 1992ರಲ್ಲಿ ಸೋಲನುಭವಿಸಿದ್ದೆ. ಆಗ ಗೆಲುವು ಸಾಧಿಸಿದ್ದ ಎಡಕ್ಕಾಡು ವಿಧಾನಸಭಾ ಕ್ಷೇತ್ರದ ಸಿಪಿಎಂ ನಾಯಕ ಒ. ಭರತನ್ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಇತ್ತು'
'ನನ್ನ ಪ್ರಕರಣ ಮತ್ತು ಬಾರ್ ಮಾಲಕರ ಪ್ರಕರಣ ಒಂದೇ ಪೀಠದ ಮುಂದಿತ್ತು. ನ್ಯಾಯಾಧೀಶರೊಬ್ಬರಿಗೆ ಬಾರ್ ಪರವಾನಗಿ ವಿಚಾರದಲ್ಲಿ ಲಂಚ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಆಗ ನನಗೆ ವಕೀಲರೊಬ್ಬರು ತಿಳಿಸಿದರು. ಈ ಹಣವನ್ನು ನ್ಯಾಯಾಧೀಶರಿಗೆ ಕೊಡುವುದನ್ನು ನೋಡುವುದಿದ್ದರೆ ಕೇರಳ ಭವನಕ್ಕೆ ಬನ್ನಿ ಎಂದು ಆ ವಕೀಲರು ನನಗೆ ಆಹ್ವಾನ ನೀಡಿದರು'
'ಅದರಂತೆ ನಾನು ಕೇರಳ ಭವನಕ್ಕೆ ಹೋಗಿದ್ದೆ. ವಕೀಲರು ನ್ಯಾಯಾಲಯದ ಗುಮಾಸ್ತನೊಬ್ಬನ ಮೂಲಕ ಹಣ ಕೊಡುವುದನ್ನು ನೋಡಿದೆ. ನಾನು ಇದರಲ್ಲಿ ಕೇವಲ ವೀಕ್ಷಕ ಮಾತ್ರ. ಇದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ನನ್ನಲ್ಲಿಲ್ಲ. ಹಾಗೊಂದು ವೇಳೆ ನಾನು ಸತ್ಯ ಬಹಿರಂಗಪಡಿಸಿರುವುದಕ್ಕೆ ಶಿಕ್ಷೆ ಕೊಡುವುದಿದ್ದರೆ, ಅದನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ'