ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ವೀಕ್- ಅಡ್ವಾಣಿ | ಕರ್ನಾಟಕ ಮರೆತಿರೇ?- ಕಾಂಗ್ರೆಸ್ (Congress | BJP | Manmohan Singh | LK Advani)
ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಮತ್ತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರೊಬ್ಬ ದುರ್ಬಲ ಪ್ರಧಾನಿ, ಇಂತವರಿಂದ ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ನಿರೀಕ್ಷೆಯಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕರ್ನಾಟಕದ ಭ್ರಷ್ಟಾಚಾರದ ಕುರಿತು ತಾವುಗಳು ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದೆ.

ಮನಮೋಹನ್ ಸಿಂಗ್ ಬಗ್ಗೆ ನನಗೆ ತುಂಬಾ ಮರುಕ ಹುಟ್ಟುತ್ತಿದೆ. ಅವರೊಬ್ಬ ದುರ್ಬಲ ಪ್ರಧಾನ ಮಂತ್ರಿ. ಒಬ್ಬ ವ್ಯಕ್ತಿ ಒಳ್ಳೆಯವನಾಗಿರಬಹುದು. ಆದರೆ, ಆತ ದುರ್ಬಲನಾಗಿದ್ದು, ಪ್ರಧಾನ ಮಂತ್ರಿಯಾದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲಾರ. ಮೊತ್ತ ಮೊದಲ ಬಾರಿಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಧಾನ ಮಂತ್ರಿಯೊಬ್ಬರು ಅಫಿಡವಿತ್ ಸಲ್ಲಿಸುವ ಪ್ರಸಂಗ ಎದುರಾಗಿತ್ತು ಎಂದು ಅಡ್ವಾಣಿ ವಾಕ್ ಪ್ರಹಾರ ನಡೆಸಿದರು.

2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಯುಪಿಎ ಸರಕಾರವು ಬಗ್ಗುತ್ತಿರುವ ಲಕ್ಷಣಗಳನ್ನು ತೋರಿಸುತ್ತಿರುವ ಹಿನ್ನೆಲೆಯಲ್ಲಿ, ಇತರ ಹಗರಣಗಳನ್ನು ಕೂಡ ಜೆಪಿಸಿಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

'2ಜಿ ಹಗರಣವನ್ನು ಮಾತ್ರ ಜೆಪಿಸಿ ತನಿಖೆಗೆ ಒಪ್ಪಿಸಿದರೆ, ಅದರಿಂದ ಕೇವಲ ಡಿಎಂಕೆ ಮಾತ್ರ ಅಪಕೀರ್ತಿಗೊಳಗಾಗುತ್ತದೆ. ನಾವು ಕಾಮನ್‌ವೆಲ್ತ್ ಗೇಮ್ಸ್ ಮತ್ತು ಆದರ್ಶ ಸೇರಿದಂತೆ ಎಲ್ಲಾ ಹಗರಣಗಳನ್ನು ಜೆಪಿಸಿಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ' ಎಂದು ಅಡ್ವಾಣಿ ಒತ್ತಾಯಿಸಿದರು.

ಕರ್ನಾಟಕದ ಬಗ್ಗೆ ಮೌನ ಯಾಕೆ?
ಇದು ಕಾಂಗ್ರೆಸ್ ಎತ್ತಿರುವ ಪ್ರಶ್ನೆ. ಭ್ರಷ್ಟಾಚಾರದ ಬಗ್ಗೆ ಇಷ್ಟೆಲ್ಲ ಮಾತನಾಡುವ ನೀವು ಕರ್ನಾಟಕದ ಹಗರಣಗಳ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ? ಭಿನ್ನ ನಿಲುವು ತಳೆಯುತ್ತಿರುವುದು ಯಾಕೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿಯನ್ನು ಅಡ್ವಾಣಿ ಟೀಕಿಸಿರುವುದನ್ನು, ಹಳೆ ಗ್ರಾಮೋಫೋನ್ ರೆಕಾರ್ಡಿನಲ್ಲೇ ಇದ್ದಾರೆ ಎಂದು ಲೇವಡಿ ಮಾಡಿರುವ ಅವರು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಇರಬಾರದು; ಪ್ರತಿಪಕ್ಷವು ಸಂಸತ್ ಕಲಾಪಕ್ಕೆ ಅವಕಾಶ ಕಲ್ಪಿಸಬೇಕು. ಅಡ್ವಾಣಿಯವರ ಬಗ್ಗೆ ನನಗೆ ಮರುಕವಿದೆ. ಎನ್‌ಡಿಎ ಮುಖ್ಯಸ್ಥರಾಗಿರುವ ಅವರು ದುರದೃಷ್ಟಕರವಾಗಿ ಕೆಟ್ಟು ಹೋದ ಗ್ರಾಮೋಫೋನ್‌ನಂತೆ ಕಾಣುತ್ತಿದ್ದಾರೆ. ಇದೇ ವಿಚಾರವನ್ನು ಅವರು 2009ರ ಚುನಾವಣೆಗಳಲ್ಲೂ ಹೇಳಿದ್ದರು ಎಂದರು.

ಅವರು (ಬಿಜೆಪಿ ನಾಯಕರು) ಪ್ರಧಾನ ಮಂತ್ರಿ ವಿರುದ್ಧ ಮಾಡಿದ ವೈಯಕ್ತಿಕ ಟೀಕೆಗಳು ಅವರ (ಮನಮೋಹನ್ ಸಿಂಗ್) ಘನತೆಗೆ ತಕ್ಕುದಾಗಿರಲಿಲ್ಲ. ಇದನ್ನು ಜನತೆ ಕೂಡ ತಿರಸ್ಕರಿಸಿದರು. ಬಿಜೆಪಿಯದ್ದು ಪಲಾಯನ ವಾದ. ಕರ್ನಾಟಕದ ಹಗರಣಗಳ ಕುರಿತು ಬಿಜೆಪಿಯ ನಿಲುವು ಏನು ಎಂದು ನಾನು ಅಡ್ವಾಣಿಯವರಲ್ಲಿ ಕೇಳಲು ಬಯಸುತ್ತಿದ್ದೇನೆ. ಕರ್ನಾಟಕದ ಬಗ್ಗೆ ನೀವು ಏನಾದರೂ ಮಹತ್ವದ ವಾಸ್ತವಿಕ ನಿಲುವನ್ನು ತೆಗೆದುಕೊಂಡಿದ್ದೀರಾ ಎಂದು ತಿವಾರಿ ಪ್ರಶ್ನಿಸಿದರು.
ಇವನ್ನೂ ಓದಿ