ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮ್ಮಿಶ್ರ ಧರ್ಮ ಎಂದರೆ ಭ್ರಷ್ಟಾಚಾರವಲ್ಲ: ಪ್ರಧಾನಿಗೆ ಬಿಜೆಪಿ (Manmohan Singh | BJP | Nitin Gadkari | UPA govt)
ಸಮ್ಮಿಶ್ರ ರಾಜಕೀಯ ಧರ್ಮ ಎಂದರೆ ಭ್ರಷ್ಟಾಚಾರವನ್ನು ಬೆಂಬಲಿಸುವುದಲ್ಲ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ಪ್ರಧಾನಿಯವರು ಹಲವು ಹಗರಣಗಳಿಗೆ ಈ ಮೂಲಕ ಸಮರ್ಥನೆ ನೀಡಲು ಮತ್ತು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದೆ.

ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳ ಜತೆಗಿನ ಪ್ರಧಾನಿಯವರ ಪ್ರಶ್ನೋತ್ತರ ತೀವ್ರ ನಿರಾಸೆ ಮೂಡಿಸಿದ್ದು, ಅವರು ಅಸಹಾಯಕರಾಗಿರುವುದನ್ನು ತೋರಿಸಿದೆ. ಸಮ್ಮಿಶ್ರಮ ರಾಜಕೀಯ ಧರ್ಮವೆಂದರೆ ಭ್ರಷ್ಟಾಚಾರವನ್ನು ಬೆಂಬಲಿಸುವುದು ಎಂದಲ್ಲ. ಸಮ್ಮಿಶ್ರ ಎಂಬ ನೆಲೆಯಲ್ಲಿ ಸಿಗುವ ಹಗರಣ 2ಜಿ ಮಾತ್ರ. ಇಸ್ರೋ, ಕಾಮನ್‌ವೆಲ್ತ್ ಗೇಮ್ಸ್, ಆದರ್ಶ ಹಗರಣಗಳು ಮತ್ತು ಸಮ್ಮಿಶ್ರಕ್ಕಿರುವ ಸಂಬಂಧವೇನು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಪ್ರಶ್ನಿಸಿದರು.

ಮಾಧ್ಯಮಗಳ ಜತೆ ಸಂವಾದ ಏರ್ಪಡಿಸಿರುವುದು ಸರಕಾರದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು. ಪ್ರಧಾನಿಯವರು ಸಮ್ಮಿಶ್ರ ರಾಜಕೀಯದ ಹೆಸರಿನಲ್ಲಿ ಭ್ರಷ್ಟಾಚಾರವನ್ನು, ಅವ್ಯವಹಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಗಡ್ಕರಿ ಆರೋಪಿಸಿದರು.

ಹಗರಣಗಳನ್ನು ಮುಚ್ಚಿ ಹಾಕಲು ಒಂದು ರೀತಿಯಲ್ಲಿ ಯತ್ನ ಮಾಡಲಾಗುತ್ತಿದೆ. ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಾ, ಮಾಧ್ಯಮಗಳು ಮತ್ತು ಪ್ರತಿಪಕ್ಷಗಳ ಮೇಲೆ ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಆರೋಪ ಮಾಡಿದ್ದಾರೆ. ಅವರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದಿರುವ ಬಿಜೆಪಿ ಅಧ್ಯಕ್ಷ, ಗುಜರಾತ್ ಸಚಿವರ ಕುರಿತ ಆರೋಪವನ್ನು ನಿರಾಕರಿಸಿದರು.

ಗುಜರಾತಿನ ವ್ಯಕ್ತಿಯೊಬ್ಬರ ಮೇಲಿನ ಕೇಂದ್ರದ ಮಾತುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿ ಬಯಸುತ್ತಿದೆ ಎಂದು ಪ್ರಧಾನಿ ಹೇಳಿದ್ದರು. ಇದು ಹಾಸ್ಯಾಸ್ಪದ ಎಂದು ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ಜೆಪಿಸಿ ರಚನೆ ಮತ್ತು ಸಂಸತ್ತಿನ ಬಜೆಟ್ ಅಧಿವೇಶನ ವಿಚಾರಗಳ ಕುರಿತು ಮಾತನಾಡುತ್ತಾ, ಕಲಾಪ ನಡೆಯದೇ ಇರುವುದಕ್ಕೆ ಪ್ರತಿಪಕ್ಷಗಳನ್ನು ದೂರುವುದು ಸರಿಯಲ್ಲ. ಪ್ರಧಾನಿಯವರು ವಿಪಕ್ಷಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಜೆಪಿಸಿ ಬಗ್ಗೆ ಈಗ ಸರಕಾರ ಚಿಂತನೆ ನಡೆಸುತ್ತಿರುವುದಾದರೆ, ಚಳಿಗಾಲದ ಅಧಿವೇಶನವನ್ನು ವ್ಯರ್ಥ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದರು.

ಸಿಂಗ್ ರಾಜೀನಾಮೆ ಕೊಡಬೇಕೆಂದು ಪ್ರಮುಖ ಪ್ರತಿಪಕ್ಷವು ಆಗ್ರಹಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸದ ಗಡ್ಕರಿ, ಸರಕಾರದ ಕೆಟ್ಟ ಪ್ರದರ್ಶನಕ್ಕೆ ತಂಡದ ನಾಯಕನೇ ಹೊಣೆಗಾರ ಎಂದಷ್ಟೇ ತಿಳಿಸಿದರು.
ಇವನ್ನೂ ಓದಿ