ರಾಜಕೀಯ ಮತ್ತು ಕೌಟುಂಬಿಕ ವಿಚಾರಗಳನ್ನು ಪರಸ್ಪರ ಬೆರೆಸದೆ ರಕ್ತ ಸಂಬಂಧಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಮಹತ್ವದ ಸೌಮ್ಯ ಹೆಜ್ಜೆಯನ್ನಿಟ್ಟಿರುವ ಬಿಜೆಪಿ ನಾಯಕ ವರುಣ್ ಗಾಂಧಿ, ತನ್ನ ದೊಡ್ಡಮ್ಮ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಮುಂದಿನ ತಿಂಗಳು ನಡೆಯುವ ವಿವಾಹ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು.
ಬುಧವಾರ ಸೋನಿಯಾ ಗಾಂದಿಯವರ 10 ಜನಪಥ ರಸ್ತೆಯಲ್ಲಿನ ನಿವಾಸಕ್ಕೆ ತೆರಳಿದ 30ರ ಹರೆಯದ ಫಿಲಿಬಿಟ್ ಸಂಸದ, ತನ್ನ ಮದುವೆಯ ಆಮಂತ್ರಣ ಪತ್ರವನ್ನು ನೀಡಿ ಮಧ್ಯಾಹ್ನದ ಭೋಜನದ ನಂತರ ಮರಳಿದರು. ಇದೊಂದು ಖಾಸಗಿ ಭೇಟಿಯಾಗಿತ್ತು. ಅವರಿಬ್ಬರು ಸುಮಾರು ಒಂದು ಗಂಟೆಗಳ ಕಾಲ ಜತೆಯಾಗಿ ಕಳೆದರು ಎಂದು ಮೂಲಗಳು ಹೇಳಿವೆ.
ಗ್ರಾಫಿಕ್ ಡಿಸೈನರ್, ತನ್ನ ಬಹುಕಾಲದ ಗೆಳತಿ ಬೆಂಗಾಲಿ ಹುಡುಗಿ ಯಾಮಿನಿ ರಾಯ್‌ರನ್ನು ಇದೇ ಮಾರ್ಚ್ 6ರಂದು ವಾರಣಾಸಿಯ ಹನುಮಾನ್ ಘಾಟ್‌ನ ಕಂಚಿ ಮಠದಲ್ಲಿ ವರುಣ್ ಗಾಂಧಿ ವರಿಸಲಿದ್ದಾರೆ. ಕಂಚಿ ಶ್ರೀ ಜಯೇಂದ್ರ ಸರಸ್ವತಿಯವರು ಮದುವೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.
ಬಳಿಕ ದೆಹಲಿ ಮತ್ತು ಫಿಲಿಬಿಟ್‌ನಲ್ಲಿ ಎರಡು ಪ್ರತ್ಯೇಕ ಆರತಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ದೆಹಲಿಯಲ್ಲಿನ ಆರತಕ್ಷತೆಗೆ ಆಗಮಿಸುವಂತೆ ತನ್ನ ದೊಡ್ಡಮ್ಮ ಸೋನಿಯಾರನ್ನು ವರುಣ್ ಆಹ್ವಾನಿಸಿದ್ದಾರೆ.
ಶೀಘ್ರದಲ್ಲೇ ತನ್ನ ಸಹೋದರ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿಯವರನ್ನು ಕೂಡ ಆಹ್ವಾನಿಸುವ ಸಾಧ್ಯತೆಗಳಿವೆ.
ಇತ್ತೀಚೆಗಷ್ಟೇ ಪತ್ರಕರ್ತರಿಗೆ ಮಾತಿಗೆ ಸಿಕ್ಕಿದ್ದ ವರುಣ್ ತಾಯಿ, ಬಿಜೆಪಿ ಸಂಸದೆ, ಇಂದಿರಾ ಗಾಂಧಿ ಕಿರಿಯ ಸೊಸೆ ಮೇನಕಾ ಗಾಂಧಿ, ಗಾಂಧಿ ಕುಟುಂಬದ ಎಲ್ಲರನ್ನೂ ಆಹ್ವಾನಿಸಲಾಗುತ್ತದೆ ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಪಶ್ಚಿಮ ಬಂಗಾಲದ ಶಾಂತಿನಿಕೇತನ ಮೂಲದವರಾಗಿರುವ ಚಿತ್ರ ವಿಮರ್ಶಕಿ ಅರುಣಾ ವಾಸುದೇವ್ ಪುತ್ರಿ ಯಾಮಿನಿ ದೆಹಲಿಯಲ್ಲಿ ಗ್ರಾಫಿಕ್ ಡಿಸೈನಿಂಗ್ ಸ್ಟುಡಿಯೋ ನಡೆಸುತ್ತಿದ್ದಾರೆ.