'ಮಹಾನ್ ಕಳ್ಳ' ಹಸನ್ ಆಲಿ ಖಾತೆ ನಮ್ಮಲ್ಲಿಲ್ಲ: ಸ್ವಿಸ್ ಬ್ಯಾಂಕ್
ಮುಂಬೈ, ಗುರುವಾರ, 17 ಫೆಬ್ರವರಿ 2011( 13:28 IST )
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, ಗೃಹಸಚಿವ ಆರ್.ಆರ್. ಪಾಟೀಲ್, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಮುಂತಾದ ಕಾಂಗ್ರೆಸ್ ನಾಯಕರ ಜತೆ ಸಂಬಂಧ ಹೊಂದಿರುವ ಮತ್ತು ಭಾರೀ ತೆರಿಗೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಹಸನ್ ಆಲಿ ನಮ್ಮ ಜತೆ ಯಾವುದೇ ರೀತಿಯ ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ ಸ್ಪಷ್ಟನೆ ನೀಡಿದೆ.
ಹಸನ್ ಆಲಿ ಖಾನ್ ಹೆಸರಿನಲ್ಲಿ ಯುಬಿಎಸ್ ಬ್ಯಾಂಕಿನಲ್ಲಿ ಯಾವುದೇ ಖಾತೆಯಾಗಲಿ ಅಥವಾ ಆಸ್ತಿಯಾಗಲಿ ಹೊಂದಿಲ್ಲ. ಮಾಧ್ಯಮ ವರದಿಗಳಲ್ಲಿ ಬಂದಿರುವಂತೆ ಯಾವುದೇ ರೀತಿಯ ಕಾನೂನು ಬಾಹಿರ ವ್ಯವಹಾರಗಳು ನಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇಂತಹ ಆರೋಪಗಳು ಸುಳ್ಳು ಎನ್ನುವುದು ದಾಖಲೆಗಳ ಮೂಲಕವೂ ಸಾಬೀತುಗೊಳ್ಳಲಿದೆ ಎಂದು ಯುಬಿಎಸ್ ಬುಧವಾರ ಹೇಳಿಕೊಂಡಿದೆ.
8 ಬಿಲಿಯನ್ ಅಮೆರಿಕನ್ ಡಾಲರ್ ಕಪ್ಪುಹಣ ತೆರಿಗೆ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಸನ್ ಜತೆ ಸ್ವಿಸ್ ಯುಬಿಎಸ್ ಬ್ಯಾಂಕು ಸಂಬಂಧ ಹೊಂದಿದ್ದು, ಅದನ್ನು ಮರೆ ಮಾಚಲು ಯತ್ನಿಸುತ್ತಿದೆ ಎಂದು ವರದಿಗಳು ಆರೋಪಿಸಿದ್ದವು.
ಇತ್ತೀಚೆಗಷ್ಟೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹಸನ್ ಆಲಿ ದೇಶ ಬಿಟ್ಟು ಹೋಗದಂತೆ ಖಚಿತಪಡಿಸುವಂತೆ ಕೇಂದ್ರ ಸರಕಾರಕ್ಕೆ ಸ್ಪಷ್ಟ ಸೂಚನೆ ನೀಡಿತ್ತು.
ಯುಬಿಎಸ್ ಬ್ಯಾಂಕ್ 2007ರಲ್ಲೂ ಇದೇ ರೀತಿಯ ಸ್ಪಷ್ಟನೆ ನೀಡಿತ್ತು. ಹಸನ್ ಆಲಿ ತಮ್ಮಲ್ಲಿ ಖಾತೆ ಹೊಂದಿದ್ದಾನೆ ಎಂದು ಬಹಿರಂಗಗೊಂಡಿರುವ ದಾಖಲೆ ನಕಲಿ ಎಂದು ಸ್ವಿಸ್ ಜಸ್ಟೀಸ್ ಇಲಾಖೆಗೆ ತಿಳಿಸಿತ್ತು. ಇದನ್ನು ತನಿಖೆಗೊಳಪಡಿಸಿದ್ದ ಸ್ವಿಸ್ ಇಲಾಖೆಯು, ಬ್ಯಾಂಕ್ ಹೇಳುತ್ತಿರುವುದು ಹೌದು ಎಂದು ಒಪ್ಪಿಕೊಂಡಿತ್ತು.
2006ರ ಡಿಸೆಂಬರ್ 8ರಂದು ಭಾರತದ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದ್ದ ಮಾಹಿತಿಯ ಪ್ರಕಾರ, ಹಸನ್ ಆಲಿ ಯುಬಿಎಸ್ ಬ್ಯಾಂಕಿನಲ್ಲಿ 8.04 ಬಿಲಿಯನ್ ಡಾಲರ್ ಹಣ ಜಮಾವಣೆ ಮಾಡಿದ್ದ. ಇದನ್ನು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದು ಯುಬಿಎಸ್ ಬ್ಯಾಂಕಿನ ಸಂಪತ್ತು ನಿರ್ವಹಣಾ ಅಧಿಕಾರಿ.
ಸ್ವಿಸ್ ಬ್ಯಾಂಕಿನಲ್ಲಿ 8 ಬಿಲಿಯನ್ ಡಾಲರ್ ಹಣ ಹೊಂದಿದ್ದ ಖಾತೆಯಿತ್ತು ಎಂದು ಭಾರತ ವಾದಿಸುತ್ತಿದೆ. ಆದರೆ ಹಸನ್ ಆಲಿ ಖಾತೆಯೇ ನಮ್ಮಲ್ಲಿಲ್ಲ ಎಂದು ಸ್ವಿಸ್ ಬ್ಯಾಂಕ್ ವಾದಿಸುತ್ತಿದೆ. ಪ್ರಕರಣ ಪ್ರಸಕ್ತ ಭಾರತದ ನ್ಯಾಯಾಲಯದಲ್ಲಿದೆ.