ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾಳೆ ಗೋದ್ರಾ ತೀರ್ಪು; ಹಿಂದೂಗಳಿಗೆ ಸಿಗುವುದೇ ನ್ಯಾಯ?
(Godhra judgement | Gujarat | Narendra Modi | Hindu kar sevaks)
ನಾಳೆ ಗೋದ್ರಾ ತೀರ್ಪು; ಹಿಂದೂಗಳಿಗೆ ಸಿಗುವುದೇ ನ್ಯಾಯ?
ಅಹಮದಾಬಾದ್, ಶುಕ್ರವಾರ, 18 ಫೆಬ್ರವರಿ 2011( 12:02 IST )
ಗುಜರಾತ್ ಕೋಮು ಹಿಂಸಾಚಾರಕ್ಕೆ ಮೂಲ ಕಾರಣವಾದ ಗೋದ್ರಾ ರೈಲು ಹತ್ಯಾಕಾಂಡದ ಕುರಿತ ಮಹತ್ವದ ತೀರ್ಪು ಶನಿವಾರ ಹೊರ ಬೀಳಲಿದೆ. 58 ಕರಸೇವಕರು ಬಲಿಯಾದ ದುರಂತದಲ್ಲಿ ಹಿಂದೂಗಳಿಗೆ ನ್ಯಾಯ ಸಿಗಲಿದೆಯೇ ಎನ್ನುವುದು ನಾಳೆ ಬಹಿರಂಗವಾಗಲಿದೆ.
2002ರಲ್ಲಿ ನಡೆದಿದ್ದ ಈ ಘಟನೆಯ ನಂತರ ಗುಜರಾತಿನಾದ್ಯಂತ ಕೋಮುಗಲಭೆಗಳು ನಡೆದಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿನ ವಿಶೇಷ ನ್ಯಾಯಾಲಯವು ಈ ತೀರ್ಪನ್ನು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಗುಜರಾತಿನ ಆಯಕಟ್ಟಿನ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಕಣ್ಗಾವಲು ಹಾಕಲಾಗಿದೆ.
PR
2010ರ ಸೆಪ್ಟೆಂಬರಿನಲ್ಲೇ ಪ್ರಕರಣದ ವಿಚಾರಣೆ ಮುಗಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಆರ್. ಪಟೇಲ್, ಘಟನೆ ನಡೆದ ಒಂಬತ್ತು ವರ್ಷಗಳ ನಂತರ ಫೆ.19ರಂದು ತೀರ್ಪು ನೀಡುವುದಾಗಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್, ಈ ಪ್ರಕರಣದ ತೀರ್ಪು ನೀಡದಂತೆ ತಡೆಯಾಜ್ಞೆ ನೀಡಿತ್ತು.
ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸಮೀಪ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದ 58 ಹಿಂದೂ ಕರಸೇವಕರು 27-02-2002ರಂದು ಮುಂಜಾನೆ 7.43ಕ್ಕೆ ಸಜೀವ ದಹನಗೊಂಡಿದ್ದರು. ಇದು ಗೋದ್ರಾದ ಮುಸ್ಲಿಂ ಗುಂಪಿನ ಕೃತ್ಯ ಎಂದು ಆರೋಪಿಸಲಾಗಿದೆ.
ಹಿಂಸಾಚಾರದ ದೃಶ್ಯ ಪ್ರಸಾರ ನಿಷೇಧ... ಗೋದ್ರಾ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಂಭೀರ ಕ್ರಮಗಳಿಗೆ ಮುಂದಾಗಿರುವ ಪಂಚಮಹಲ್ ಜಿಲ್ಲಾಧಿಕಾರಿ, ಹಿಂಸಾಚಾರದ ಕುರಿತ ವೀಡಿಯೋ ಪ್ರಸಾರ ಮಾಡದಂತೆ ವಿದ್ಯುನ್ಮಾನ ಮಾಧ್ಯಮಗಳಿಗೆ ಆದೇಶ ನೀಡಿದ್ದಾರೆ.
ತೀರ್ಪು ಹೊರ ಬರುವ ಫೆಬ್ರವರಿ 19ರ ಶನಿವಾರದಂದು, 2002ರ ಗುಜರಾತ್ ಗಲಭೆಗಳಿಗೆ ಸಂಬಂಧಪಟ್ಟ ಯಾವುದೇ ವೀಡಿಯೋ ಪ್ರಸಾರವನ್ನು ಮಾಡಬಾರದು. ಇದನ್ನು ಉಲ್ಲಂಘಿಸಿದಲ್ಲಿ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಿಲಿಂದ್ ತೊರಾವಾನೆ ನಿರ್ಬಂಧ ವಿಧಿಸಿದ್ದಾರೆ.
ಫೆಬ್ರವರಿ 19ರಿಂದ 23ರವರೆಗೆ ಸಾರ್ವಜನಿಕ ಸಮಾರಂಭಗಳು ಮತ್ತು ಮೆರವಣಿಗೆಗಳನ್ನು ಕೂಡ ನಡೆಸದಂತೆ ನಿಷೇಧ ಹೇರಲಾಗಿದೆ. ಪಂಚಮಹಲ್ ಜಿಲ್ಲೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು, ಆಯುಧಗಳನ್ನು ಧರಿಸಿರಬಾರದು ಎಂದೂ ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗಿದೆ.