ಸೋನಿಯಾ ಗಾಂಧಿ ಮತ್ತು ಅವರ ದಿವಂಗತ ಪತಿ ರಾಜೀವ್ ಗಾಂಧಿ ಸ್ವಿಸ್ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ ಎಂದು ಬಿಜೆಪಿಯ ವಿಶೇಷ ತನಿಖಾ ವರದಿಯಲ್ಲಿ ಆರೋಪಿಸಿರುವುದಕ್ಕೆ ಎಲ್.ಕೆ. ಆಡ್ವಾಣಿಯವರು ಕಾಂಗ್ರೆಸ್ ಅಧ್ಯಕ್ಷೆಯ ಕ್ಷಮೆ ಯಾಚಿಸಿದ್ದಾರೆ.
ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಆಡ್ವಾಣಿ, ಗಂಭೀರ ಆರೋಪ ಮಾಡಿರುವುದಕ್ಕೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಅಕ್ರಮವಾಗಿ ಶೇಖರಿಸಿಟ್ಟಿರುವ ಕಪ್ಪುಹಣವನ್ನು ಪತ್ತೆ ಹಚ್ಚುವ ಮತ್ತು ಅದನ್ನು ವಾಪಸ್ ದೇಶಕ್ಕೆ ಮರಳಿ ತರುವ ಸಂಬಂಧ ಬಿಜೆಪಿಯು ವಿಶೇಷ ತನಿಖಾ ದಳವೊಂದನ್ನು ರಚಿಸಿತ್ತು.
ಭಾರತೀಯರ ಹೆಸರಿನಲ್ಲಿರುವ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಸೇರಿದ ಖಾತೆಗಳೂ ಇವೆ ಎಂದು ಬಿಜೆಪಿಯ ಈ ವರದಿ ಆರೋಪಿಸಿತ್ತು.
ಬಿಜೆಪಿ ಆರೋಪದಿಂದ ತೀವ್ರವಾಗಿ ನೊಂದುಕೊಂಡಿದ್ದ ಸೋನಿಯಾ ಗಾಂಧಿಯವರು ಆಡ್ವಾಣಿಯವರಿಗೆ ಪತ್ರ ಬರೆದಿದ್ದರು. ನಾನು ಅಥವಾ ನನ್ನ ಗಂಡ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿಲ್ಲ ಎಂದು ಸೋನಿಯಾ ಆರೋಪಗಳನ್ನು ತಳ್ಳಿ ಹಾಕಿದ್ದರು.
ಕಾಂಗ್ರೆಸ್ ಅಧ್ಯಕ್ಷೆಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಆಡ್ವಾಣಿ, ಬಿಜೆಪಿ ವರದಿಯಲ್ಲಿ ಸೋನಿಯಾ ಮತ್ತು ಅವರ ಪತಿ ರಾಜೀವ್ ಹೆಸರನ್ನು ಉಲ್ಲೇಖಿಸಿರುವುದಕ್ಕೆ ವಿಷಾದಿಸಿದ್ದಾರೆ. ಅಲ್ಲದೆ, ನೆಹರೂ ಕುಟುಂಬವು ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ಹೊಂದಿದೆ ಎಂಬ ಗಾಳಿಸುದ್ದಿಗಳು ಹರಡುತ್ತಿರುವಾಗಲೇ ನೀವು ಅದನ್ನು ತಳ್ಳಿ ಹಾಕುತ್ತಿದ್ದರೆ, ಬಿಜೆಪಿಯ ವರದಿಯಲ್ಲಿ ನಿಮ್ಮ ಹೆಸರು ಬರುತ್ತಿರಲಿಲ್ಲ ಎಂದೂ ಹೇಳಿದ್ದಾರೆ.
ಎಸ್. ಗುರುಮೂರ್ತಿ, ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಅಜಿತ್ ದೋವಲ್, ಪ್ರೊಫೆಸರ್ ಆರ್. ವೈದ್ಯನಾಥನ್ ಮತ್ತು ನ್ಯಾಯವಾದಿ ಮಹೇಶ್ ಜೇಠ್ಮಲಾನಿ ಅವರನ್ನೊಳಗೊಂಡಿದ್ದ ಬಿಜೆಪಿ ತನಿಖಾ ದಳವು, ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರಿಂದ ಶೇಖರಿಸಲ್ಪಟ್ಟಿರುವ ಕಪ್ಪುಹಣ ಸುಮಾರು 25 ಲಕ್ಷ ಕೋಟಿ ರೂಪಾಯಿ ಎಂದಿತ್ತು.
ಬಿಜೆಪಿ ನೇಮಿಸಿದ್ದ ಈ ತನಿಖಾ ದಳದ Indian Black Money Abroad in Secret Banks and Tax Havens ಎಂಬ ಎರಡನೇ ವರದಿಯನ್ನು ಫೆಬ್ರವರಿ 1ರಂದು ಎನ್‌ಡಿಎ ನಾಯಕರು ಬಿಡುಗಡೆ ಮಾಡಿದ್ದರು.
ಅದೇ ಹೊತ್ತಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಆಡ್ವಾಣಿಯವರು ಸೋನಿಯಾ ಗಾಂಧಿಯವರ ಕ್ಷಮೆ ಕೇಳಿಲ್ಲ ಎಂದಿದೆ.