ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲಿನ ಗಂಭೀರ ಆರೋಪಕ್ಕಾಗಿ ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿ ಕ್ಷಮೆ ಯಾಚಿಸಿರುವ ಪ್ರಸಂಗಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಅಂಬಿಕಾ ಸೋನಿ, ಅವರು ನಿವೃತ್ತರಾಗಿದ್ದಾರೆ ಎಂದು ನಾನು ಭಾವಿಸಿದ್ದೆ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ, 'ಅಡ್ವಾಣಿಯವರು ಕೆಲವು ಸಮಯದ ಹಿಂದೆ ನಿವೃತ್ತರಾಗಿ, ಸದನದ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿರುವ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಮುಂತಾದ ಕಿರಿಯರಿಗೆ ಆ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ನಾನು ಅಂದುಕೊಂಡಿದ್ದೆ' ಎಂದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ದಿವಂಗತ ಪತಿ ರಾಜೀವ್ ಗಾಂಧಿಯವರು ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದಾರೆ ಎಂದು ಬಿಜೆಪಿಯ ತನಿಖಾ ಸಮಿತಿಯು ವರದಿ ಮಾಡಿದ ನಂತರ, ಈ ಕುರಿತು ಸೋನಿಯಾ ಅವರಲ್ಲಿ ಆಡ್ವಾಣಿಯವರು ಕ್ಷಮೆ ಯಾಚಿಸಿರುವುದಕ್ಕೆ ಪ್ರತಿಕ್ರಿಯೆಯೇನು ಎಂದಾಗ ಮೇಲಿನಂತೆ ಸೋನಿ ಹೇಳಿದರು.
'ಆಡ್ವಾಣಿಯವರು ಪ್ರತಿದಿನ ಭಿನ್ನ ವಿಚಾರಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಅವರು ಏನು ಹೇಳುತ್ತಾರೋ, ಬಹುಶಃ ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಿಲ್ಲ ಎನ್ನುವುದು ನನ್ನ ಅನಿಸಿಕೆ' ಎಂದರು.
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿರುವ ಭಾರತೀಯರ ಹೆಸರುಗಳನ್ನು ಪತ್ತೆ ಹಚ್ಚಲು ಬಿಜೆಪಿಯು ತನಿಖಾ ಸಮಿತಿಯೊಂದನ್ನು ನೇಮಕ ಮಾಡಿತ್ತು. ಆ ವರದಿಯಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹೆಸರುಗಳೂ ಇದ್ದವು. ಇವರು ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದರ ಆಡ್ವಾಣಿಗೆ ಸೋನಿಯಾ ಪತ್ರ ಬರೆದಿದ್ದರು. ನಾನು ಅಥವಾ ನನ್ನ ಗಂಡ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೇ ಸಂಬಂಧ ಈಗ ಆಡ್ವಾಣಿ ಕೂಡ ಸೋನಿಯಾಗೆ ಪತ್ರ ಬರೆದಿದ್ದಾರೆ. ನಮ್ಮದು ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾರೆ.