ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಭಾರೀ ಪ್ರಮಾಣದ ಕಪ್ಪುಹಣ ಹೊಂದಿರುವ 'ಮಹಾನ್ ಕಳ್ಳ' ಹಸನ್ ಆಲಿ ಖಾನ್ ಮೇಲೆ ಆದಾಯ ತೆರಿಗೆ ಇಲಾಖೆಯು 40,000 ಕೋಟಿ ರೂಪಾಯಿಗಳ ದಂಡ ಹೇರಿದೆ.
ಆದಾಯ ತೆರಿಗೆ ಇಲಾಖೆಯ ಮುಂಬೈ ಕಚೇರಿ ಸಮನ್ಸ್ ಜಾರಿಗೊಳಿಸಿದ ನಂತರ ಶುಕ್ರವಾರ ಹಾಜರಾದ ಆಲಿಯನ್ನು ವಿಚಾರಣೆಗೊಳಪಡಿಸಲಾಯಿತು. ಕಪ್ಪುಹಣ ಕುರಿತ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು. ಬಳಿಕ ಭಾರೀ ದಂಡ ಹೇರಲು ನಿರ್ಧರಿಸಲಾಗಿದೆ.
PR
ಕಪ್ಪುಹಣ ವ್ಯವಹಾರದಲ್ಲಿ ಹಸನ್ ಆಲಿಯ ಪಾತ್ರವನ್ನು ಬಯಲು ಮಾಡುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಆತನ ಹಣಕಾಸು ದಾಖಲೆಗಳನ್ನು ತಪಾಸಣೆಗೊಳಪಡಿಸಿದ್ದ ಆದಾಯ ತೆರಿಗೆ ಇಲಾಖೆಯು ಅಂತಿಮವಾಗಿ ದಂಡ ಹಾಕುವ ಮೊದಲು ಆತನ ಹೇಳಿಕೆಯನ್ನು ಪಡೆದುಕೊಳ್ಳಲು ನಿರ್ಧರಿಸಿತ್ತು. ಅದರಂತೆ ಆಲಿಗೆ ಸಮನ್ಸ್ ನೀಡಲಾಗಿತ್ತು.
ಹಸನ್ ಆಲಿ 40,000 ಕೋಟಿ ತೆರಿಗೆ ಕಟ್ಟಬೇಕಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದ ನಂತರ ಸರಕಾರವು ಅಫಿಡವಿತ್‌ನಲ್ಲಿ ಆತನ ಹೆಸರನ್ನು ನಮೂದಿಸಿತ್ತು. ಸರಕಾರದ ಪ್ರಕಾರ ಆತ ಹವಾಲಾ ಜಾಲದ ಮೂಲಕ ಸಿಂಗಾಪುರದ ಯುಬಿಎಸ್ ಸ್ವಿಸ್ ಬ್ಯಾಂಕಿನಲ್ಲಿ ಮಿಲಿಯನ್‌ಗಟ್ಟಲೆ ಡಾಲರು ಹಣವನ್ನು ಠೇವಣಿಯನ್ನಾಗಿ ಇಟ್ಟಿದ್ದಾನೆ.
ಮುಂಬೈಯಲ್ಲಿ ಕುದುರೆ ಲಾಯ ಹೊಂದಿರುವ ಹಸನ್ ಆಲಿ ಕಪ್ಪುಹಣವನ್ನು ಬಿಳಿ ಮಾಡುವುದು, ಹವಾಲಾ ಜಾಲ, ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುವುದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮುಂತಾದ ಆರೋಪಗಳನ್ನು ಎದುರಿಸುತ್ತಿದ್ದಾನೆ. ವಿದೇಶಿ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದ ಕಪ್ಪುಹಣವನ್ನು ಇಟ್ಟಿರುವ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್, ಆತ ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು.