ಇದು ಬಹುಕೋಟಿ ಮೌಲ್ಯದ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿರುವ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಅವರ ಕಥೆ. ಹೆಸರಿಗೆ ತಕ್ಕಂತೆ ರಾಜನಂತಿದ್ದ ಅವರೀಗ ತಿಹಾರ್ ಜೈಲಿನಲ್ಲಿದ್ದಾರೆ- ಥೇಟ್ ಕೈದಿಯಂತೆ. ಎಲ್ಲರಂತೆ ಅವರಿಗೂ ಸೊಳ್ಳೆಗಳು ನಿದ್ರಾರಹಿತ ರಾತ್ರಿಗಳ ಅನುಭವ ಮಾಡಿಸುತ್ತಿವೆ.
ದೇಶದ ಸುಪ್ರಸಿದ್ಧ ಜೈಲುಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನ 15x10 ಅಡಿ ಕೋಣೆಯಲ್ಲಿ ರಾಜಾ ಈಗ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ. ಊಟಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ನೆಲದಲ್ಲೇ ಮಲಗುತ್ತಿದ್ದಾರೆ.
PTI
ಮಾಜಿ ಸಚಿವ ರಾಜಾಗೆ ವಿಶೇಷ ಆಹಾರ ನೀಡುತ್ತಿಲ್ಲ. ಜೈಲಿನ ಆಹಾರವನ್ನೇ ನೀಡಲಾಗುತ್ತಿದೆ. ಇಲ್ಲಿ ಕೊಡುವ ಅನ್ನ-ಸಾಂಬಾರನ್ನೇ ತಿನ್ನುತ್ತಾರೆ. ಅವರು ನೆಲದಲ್ಲೇ ಮಲಗುತ್ತಿದ್ದಾರೆ. ಇತರ ಕೈದಿಗಳಂತೆ ಬೆಳಿಗ್ಗೆ ಆರು ಗಂಟೆಗೆ ಏಳುತ್ತಾರೆ. ಅವರಿಗೆ ವಿಐಪಿ ಉಪಚಾರ ನೀಡಲಾಗುತ್ತಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿ ಎಸ್.ಎನ್. ಗುಪ್ತಾ ತಿಳಿಸಿದ್ದಾರೆ.
'ಸೊಳ್ಳೆಗಳಿಂದಾಗಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಮೊದಲ ದಿನ ರಾಜಾ ನಮ್ಮಲ್ಲಿ ದೂರಿಕೊಂಡರು. ಸೊಳ್ಳೆ ಪರದೆ ನೀಡುವಂತೆ ವಿನಂತಿಸಿದರು. ನಂತರ ಅವರಿಗೆ ಮನೆಯಿಂದಲೇ ಹಾಸಿಗೆ, ಹೊದಿಕೆ ಮತ್ತು ತಲೆದಿಂಬುಗಳನ್ನು ನೀಡಲಾಗಿದೆ. ಆರು ಹೊದಿಕೆಗಳಲ್ಲಿ ಎರಡನ್ನು ಅಡಿಗೆ ಹಾಕಿಕೊಳ್ಳುತ್ತಾರೆ. ಎರಡನ್ನು ಹೊದ್ದುಕೊಳ್ಳುತ್ತಾರೆ. ಉಳಿದೆರಡನ್ನು ಹಾಗೆ ಉಳಿಸಿಕೊಂಡಿದ್ದಾರೆ' ಎಂದು ಇನ್ನೊಬ್ಬ ಅಧಿಕಾರಿ ವಿವರಣೆ ನೀಡಿದರು.
2008ರಲ್ಲಿ 2ಜಿ ತರಂಗಾಂತರಗಳನ್ನು ಹರಾಜು ಹಾಕದೆ ತನಗೆ ಬೇಕಾದ ಕಂಪನಿಗಳಿಗೆ ಹಂಚಿಕೆ ಮಾಡಿದ ಪರಿಣಾಮ ಕನಿಷ್ಠ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟ ಸರಕಾರಕ್ಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ, ಬಂಧಿಸಿತ್ತು. ಫೆಬ್ರವರಿ 17ರಿಂದ ಅವರು ಜೈಲಿನಲ್ಲಿದ್ದು, ಮಾರ್ಚ್ 3ರವರೆಗೆ ಅಲ್ಲೇ ಇರಬೇಕಾಗುತ್ತದೆ.
ಬೆಳಿಗ್ಗೆ ಆರು ಗಂಟೆಗೆ ಎದ್ದೇಳುವ ರಾಜಾ ದಿನಚರಿ ಮುಗಿಸಿ ಟೀ ಕುಡಿಯುತ್ತಾರೆ. ಬಳಿಕ ದಿನಪತ್ರಿಕೆಗಳತ್ತ ಕಣ್ಣಾಡಿಸುತ್ತಾರೆ. ಟಿವಿ ಸುದ್ದಿಗಳನ್ನು ಕೂಡ ವೀಕ್ಷಿಸುತ್ತಾರೆ. ಮಾಧ್ಯಮಗಳ ವಿರುದ್ಧ ಬಹುತೇಕ ಅವರು ಕೆಂಡ ಕಾರುತ್ತಿರುತ್ತಾರೆ. ನಾನು ಮುಗ್ಧ, ಯಾವುದೇ ತಪ್ಪು ಮಾಡಿಲ್ಲ. ನನ್ನ ಗೌರವವನ್ನು ಮಣ್ಣುಪಾಲು ಮಾಡಿರುವುದು ಮಾಧ್ಯಮಗಳು ಎನ್ನುತ್ತಾರೆ.
ಹಗಲು ಹೊತ್ತು ತನ್ನ ಸೆಲ್‌ನಲ್ಲಿ ಪುಸ್ತಕ ಓದುವುದರಲ್ಲೇ ರಾಜಾ ಕಾಲ ಕಳೆಯುತ್ತಾರೆ. ಕಾನೂನು ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ವಕೀಲರೊಬ್ಬರು ಜೈಲಿನ ಗ್ರಂಥಾಲಯದಿಂದ ತಂದುಕೊಟ್ಟಿದ್ದಾರೆ. ಸಂಜೆ ಐದು ಗಂಟೆಯ ಹೊತ್ತಿಗೆ ಇತರ ಕೈದಿಗಳ ಜತೆ ಸರದಿಯಲ್ಲಿ ನಿಂತು ಹಾಜರಿ ಹಾಕಿಸಿಕೊಳ್ಳುತ್ತಾರೆ ಎಂದು ಜೈಲು ಸಿಬ್ಬಂದಿ 'ಸ್ಪೆಕ್ಟ್ರಮ್' ರಾಜಾ ಕುರಿತು ತಿಳಿಸಿದ್ದಾರೆ.