ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಕಸಬ್ ಭವಿಷ್ಯವೇನು? ನಾಳೆ ಹೈಕೋರ್ಟ್ ತೀರ್ಪು (Ujjwal Nikam | Ajmal Kasab | Bombay High Court | Mumbai attack)
ಉಗ್ರ ಕಸಬ್ ಭವಿಷ್ಯವೇನು? ನಾಳೆ ಹೈಕೋರ್ಟ್ ತೀರ್ಪು
ಮುಂಬೈ, ಭಾನುವಾರ, 20 ಫೆಬ್ರವರಿ 2011( 13:24 IST )
160ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ, ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಹಣೆಬರಹ ಫೆಬ್ರವರಿ 21ರ ಸೋಮವಾರ ಬಾಂಬೆ ಹೈಕೋರ್ಟಿನಲ್ಲಿ ನಿರ್ಧಾರವಾಗಲಿದ್ದು, ಕ್ಷಣಗಣನೆ ಆರಂಭವಾಗಿದೆ.
ಮುಂಬೈ ವಿಶೇಷ ನ್ಯಾಯಾಲಯವು ಕಸಬ್‌ಗೆ ಮರಣ ದಂಡನೆ ವಿಧಿಸಿತ್ತು. ಇದನ್ನು ಖಚಿತಪಡಿಸುವ ಅರ್ಜಿಯನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದರೆ, ರದ್ದುಗೊಳಿಸಲು ಕಸಬ್ ಮೇಲ್ಮನವಿ ಮಾಡಿದ್ದ. ಜನವರಿ 17ರಂದು ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ಅವರನ್ನೊಳಗೊಂಡ ಹೈಕೋರ್ಟ್ ಪೀಠವು ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾಕ್ಕೆ ಮುಂಬೈ ದಾಳಿಗೆ ಸಹಕಾರ ನೀಡಿದ್ದ ದೇಸೀ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್‌ರನ್ನು ಮುಂಬೈ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಇದರ ವಿರುದ್ಧದ ಮೇಲ್ಮನವಿ ವಿಚಾರಣೆಯ ತೀರ್ಪು ಕೂಡ ಸೋಮವಾರ ಪ್ರಕಟವಾಗಲಿದೆ.
ಕಸಬ್ ಮರಣ ದಂಡನೆ ಬಾಂಬೆ ಹೈಕೋರ್ಟಿನಲ್ಲಿ ಖಚಿತಗೊಂಡಲ್ಲಿ, ನಂತರದ ಹಂತ ಸುಪ್ರೀಂ ಕೋರ್ಟ್.
ಎಲ್ಲರ ನಿರೀಕ್ಷೆಯೇ ನನ್ನದು: ನಿಕ್ಕಂ ಈ ದೇಶದ ಪ್ರತಿಯೊಬ್ಬರು ನಿರೀಕ್ಷಿಸುತ್ತಿರುವ ನಿರೀಕ್ಷೆಯೇ ನನ್ನದು ಕೂಡ ಆಗಿದೆ ಎಂದು ಕಸಬ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಮುಂಬೈ ವಿಶೇಷ ನ್ಯಾಯಾಲಯ ಹಾಗೂ ಬಾಂಬೆ ಹೈಕೋರ್ಟಿನಲ್ಲಿ ವಾದ ಮಂಡಿಸಿರುವ ಉಜ್ವಲ್ ನಿಕ್ಕಂ ಹೇಳಿದ್ದಾರೆ.
ಈ ಸೋಮವಾರ ನನ್ನ ಜೀವನದ ಸ್ಮರಾಣಾರ್ಹ ದಿನವಾಗಲಿದೆ ಎಂದ ನಿಕ್ಕಂ, ಹೈಕೋರ್ಟ್ ಯಾವ ತೀರ್ಪು ನೀಡಬಹುದು ಎಂದು ಭವಿಷ್ಯ ನುಡಿಯಲು ನಿರಾಕರಿಸಿದರು.
ಕಸಬ್‌ಗೆ ವಿಧಿಸಲಾಗಿರುವ ಮರಣದಂಡನೆಯನ್ನು ಖಚಿತಪಡಿಸುವ ತೀರ್ಪು, ಕಸಬ್ ಮೇಲ್ಮನವಿಯ ಕುರಿತ ತೀರ್ಪು ಮತ್ತು ಇಬ್ಬರು ದೇಸೀ ಉಗ್ರರ ಖುಲಾಸೆಯ ವಿರುದ್ಧದ ಸರಕಾರದ ಮೇಲ್ಮನವಿಯ ತೀರ್ಪನ್ನು ಹೈಕೋರ್ಟ್ ನೀಡಲಿದೆ ಎಂದಷ್ಟೇ ಸರಕಾರಿ ವಕೀಲರು ತಿಳಿಸಿದರು.