ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಲ್ಲು ಭೀತಿಯಲ್ಲಿ ಕುರಾನ್ ಪಠಿಸುತ್ತಿರುವ ಕಸಬ್
(Quran | Pakistani terrorist | Mohammed Ajmal Kasab | Mumbai attacks)
ಗಲ್ಲು ಭೀತಿಯಲ್ಲಿ ಕುರಾನ್ ಪಠಿಸುತ್ತಿರುವ ಕಸಬ್
ಮುಂಬೈ, ಸೋಮವಾರ, 21 ಫೆಬ್ರವರಿ 2011( 10:32 IST )
ಮುಂಬೈ ಭಯೋತ್ಪಾದನಾ ದಾಳಿ ನಡೆದು 27 ತಿಂಗಳ ನಂತರ ಬಾಂಬೆ ಹೈಕೋರ್ಟ್ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ತೀವ್ರ ಗಲಿಬಿಲಿಗೊಂಡಿರುವ ಪಾಕಿಸ್ತಾನಿ ಉಗ್ರ ಕಸಬ್ ಜೈಲಿನ ತನ್ನ ಕೋಣೆಯಲ್ಲಿ ಪವಿತ್ರ ಕುರಾನ್ ಪಠಿಸುತ್ತಿದ್ದಾನೆ.
ಆರ್ಥರ್ ರೋಡ್ ಜೈಲಿನಲ್ಲಿರುವ ಕಸಬ್ ಇಂದು ಮುಂಜಾನೆ ಎದ್ದು, ತನ್ನ ದಿನಚರಿಗಳನ್ನು ಮುಗಿಸಿ ಪ್ರಾರ್ಥನೆ ಸಲ್ಲಿಸಿದ. ನಂತರ ಪವಿತ್ರ ಕುರಾನ್ ಓದಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.
166 ಅಮಾಯಕರ ಸಾವಿಗೆ ಕಾರಣವಾಗಿದ್ದ ಮುಂಬೈ ದಾಳಿಯಲ್ಲಿನ ಕಸಬ್ ಪಾತ್ರಕ್ಕಾಗಿ ವಿಶೇಷ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಖಚಿತಪಡಿಸುವ ಕುರಿತು ಒಂಬತ್ತು ತಿಂಗಳ ನಂತರ ಹೈಕೋರ್ಟ್ ತನ್ನ ಮಹತ್ವದ ತೀರ್ಪನ್ನು ಇಂದು ನೀಡುತ್ತಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ನಿವಾಸಿಯಾಗಿರುವ 24ರ ಹರೆಯದ ಕಸಬ್ ಇಂದು ಕೂಡ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಬದಲಿಗೆ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಕಲಾಪವನ್ನು ವೀಕ್ಷಿಸಲಿದ್ದಾನೆ. ಕೋರ್ಟ್ ನೀಡುವ ತೀರ್ಪನ್ನು ಆಲಿಸಲಿದ್ದಾನೆ.
ಹೈಕೋರ್ಟ್ ತೀರ್ಪು ನೀಡುವುದನ್ನು ನಾನು ವೀಡಿಯೋ ಕಾನ್ಫರೆನ್ಸ್‌ನಲ್ಲಿ ನೋಡುತ್ತೇನೆ ಎಂದು ಆತ ತನ್ನ ವಕೀಲೆ ಫರ್ಹಾನಾ ಶಾರಿಗೆ ತಿಳಿಸಿದ್ದಾನೆ. ಆತ ತೀರಾ ನರ್ವಸ್ ಆಗಿದ್ದಾನೆ, ಹೆಚ್ಚು ಮಾತನಾಡುತ್ತಿಲ್ಲ ಎಂದು ಶಾ ಹೇಳಿಕೊಂಡಿದ್ದಾರೆ.
ವಿಶೇಷ ನ್ಯಾಯಾಲಯವು ಕಸಬ್‌ಗೆ ನೀಡಿರುವ ಮರಣ ದಂಡನೆ ವಿರುದ್ಧದ ಮೇಲ್ಮನವಿಯ ತೀರ್ಪನ್ನು ಕೂಡ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ಅವರನ್ನೊಳಗೊಂಡ ಹೈಕೋರ್ಟ್ ಪೀಠವು ನೀಡಲಿದೆ.
ಜತೆಗೆ ಇಬ್ಬರು ಭಾರತೀಯರ ಖುಲಾಸೆ ವಿರುದ್ಧದ ಮಹಾರಾಷ್ಟ್ರ ಸರಕಾರದ ಮೇಲ್ಮನವಿಯ ತೀರ್ಪು ಬರಲಿದೆ. ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಎಂಬವರು ಉಗ್ರರಿಗೆ ಸಹಕಾರ ನೀಡಿದ್ದರು ಎಂಬ ಆರೋಪ ಆಧೀನ ನ್ಯಾಯಾಲಯದಲ್ಲಿ ರುಜುವಾತುಗೊಂಡಿರಲಿಲ್ಲ.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತು ಜೈಲಿನ ಸುತ್ತ ಭಾರೀ ಭದ್ರತೆ ಮಾಡಲಾಗಿದೆ. ತೀರ್ಪು ನೀಡಲಿರುವ ಕೋರ್ಟ್ ನಂ.49ಕ್ಕೆ ತೆರಳುವ ಪತ್ರಕರ್ತರು ಮತ್ತು ವಕೀಲರುಗಳಿಗೆ ಸ್ಪೆಷಲ್ ಬ್ರಾಂಚ್ ಪೊಲೀಸರು ವಿಶೇಷ ಪಾಸುಗಳನ್ನು ನೀಡುತ್ತಿದ್ದಾರೆ.