ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಗ್ಗಿದ ಕೇಂದ್ರ; 2ಜಿ ಜೆಪಿಸಿ ತನಿಖೆಗೆ ಪ್ರಧಾನಿ ಅಸ್ತು (JPC probe | 2G spectrum scam | Manmohan Singh | UPA govt)
ಕಳೆದ ಕೆಲವು ತಿಂಗಳುಗಳಿಂದ ಪ್ರತಿಪಕ್ಷಗಳು ರಚ್ಚೆ ಹಿಡಿದು ಕೂತಿದ್ದ ಜಂಟಿ ಸಂಸದೀಯ ಸಮಿತಿ ತನಿಖೆಗೆ ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. 2ಜಿ ತರಂಗಾಂತರ ಹಗರಣದ ಜೆಪಿಸಿ ತನಿಖೆಯನ್ನು ಇಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರಕಟಿಸಿದ್ದಾರೆ.

ನಿನ್ನೆ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿಯವರ ಭಾಷಣಕ್ಕೆ ಇಂದು ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿಯವರು ಜೆಪಿಸಿ ತನಿಖೆಯನ್ನು ಪ್ರಕಟಿಸಿದರು.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸಹಕಾರದಿಂದ ಮುನ್ನಡೆಯಬೇಕೇ ಹೊರತು, ತಿಕ್ಕಾಟದಿಂದ ಅಲ್ಲ. ಈ ಹಿಂದಿನ ಚಳಿಗಾಲದ ಅಧಿವೇಶನ ವ್ಯರ್ಥವಾಗಿ ಹೋಗಿದೆ. ಇದು ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗೆ ಮಾಡುತ್ತಾ ಸಾಗುವುದು ನಮ್ಮನ್ನು ಆರಿಸಿದವರಿಗೆ ನಾವು ಮಾಡುವ ಅನ್ಯಾಯ ಎನಿಸುತ್ತದೆ' ಎಂದು ಲೋಕಸಭೆಯಲ್ಲಿ ಪ್ರಧಾನಿ ಅಭಿಪ್ರಾಯಪಟ್ಟರು.

ಸಾಕಷ್ಟು ಹಗರಣಗಳು ಯುಪಿಎ ಅವಧಿಯಲ್ಲಿ ನಡೆದಿರುವ ಹೊರತಾಗಿಯೂ, ಭ್ರಷ್ಟಾಚಾರದ ಮೂಲೋತ್ಪಾಟನೆಗೆ ನನ್ನ ಸರಕಾರವು ಬದ್ಧವಾಗಿದೆ ಎಂದು ಸದನಕ್ಕೆ ಪ್ರಧಾನಿ ಭರವಸೆಯಿತ್ತರು.

ಈ ಸಂಬಂಧ (2ಜಿ ಹಗರಣ) ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಕೂಡ ತನಿಖೆ ನಡೆಸಿದೆ. ಮುಂದೆ ಕೂಡ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಸಂಸತ್ತಿನ ಸುಗಮ ಕಲಾಪಕ್ಕಾಗಿ ಪ್ರತಿಪಕ್ಷಗಳನ್ನು ಸಮಾಧಾನಗೊಳಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎನ್ನುವುದು ಸರಕಾರದ ನಂಬಿಕೆ. ಆದರೆ ಇದರಿಂದ ಯಾವುದೂ ಸುಗಮವೆನಿಸಲಿಲ್ಲ. ಅದೇ ಪರಿಸ್ಥಿತಿ ಪ್ರಮುಖವೆನಿಸುವ ಬಜೆಟ್ ಅಧಿವೇಶನದಲ್ಲೂ ಆಗಬಾರದು. ಅದನ್ನು ತಪ್ಪಿಸುವ ಸಲುವಾಗಿ ಸರಕಾರವು 2ಜಿ ಹಗರಣಕ್ಕೆ ಕುರಿತಂತೆ ಜೆಪಿಸಿ ರಚನೆಗೆ ಒಪ್ಪಿದೆ ಎಂದು ಪ್ರಧಾನಿ ಸಿಂಗ್ ಪ್ರಕಟಿಸಿದರು.

ಜೆಪಿಸಿ ತನಿಖೆಯನ್ನು ಪ್ರಕಟಿಸಲಾಗಿದೆಯಾದರೂ, ಅದು ಹೇಗಿರುತ್ತದೆ? ಸಮಿತಿಯಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಮುಂತಾದುವುಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಜೆಪಿಸಿ ರಚನೆ ಬಗೆಗಿನ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಫೆಬ್ರವರಿ 24ರಂದು ಮಂಡಿಸಲಾಗುತ್ತದೆ.

ಪ್ರತಿಪಕ್ಷಗಳಿಂದ ಸ್ವಾಗತ...
ಜೆಪಿಸಿ ತನಿಖೆ ಕೈಗೊಳ್ಳುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಪ್ರಧಾನಿಯವರನ್ನು ಅಭಿನಂದಿಸಿದರು.

ಜೆಪಿಸಿ ರಚನೆಯಲ್ಲಿ ವಿರೋಧ ಪಕ್ಷಗಳ ಗೆಲುವು ಅಥವಾ ಸರಕಾರದ ಸೋಲಿನ ಪ್ರಶ್ನೆಯಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದಿರುವ ಸುಷ್ಮಾ, ಸಂಸತ್ತಿನ ಸುಗಮ ಕಲಾಪಕ್ಕೆ ಎಲ್ಲಾ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಇತರ ಪ್ರತಿಪಕ್ಷಗಳು ಕೂಡ ಸರಕಾರದ ನಿರ್ಧಾರವನ್ನು ಸ್ವಾಗತಿಸಿವೆ. ಕೇಂದ್ರ ಸರಕಾರವು ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ಹಾಗಾಗಿ ಅಭಿನಂದಿಸುವ ಅಗತ್ಯವಿಲ್ಲ ಎಂದು ಎಡಪಕ್ಷಗಳು ಹೇಳಿವೆ.
ಇವನ್ನೂ ಓದಿ