ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾತು ಬಿಟ್ಟ ಕಸಬ್; ಪಾಕ್ ಪಾಪಿಗೂ ಸಾವಿನ ಭಯವೇ? (Ajmal Kasab | Mumbai attacks | Bombay High Court | Pakistani terrorist)
ತನ್ನ ಸಹಚರರೊಂದಿಗೆ ಸೇರಿಕೊಂಡು ನೂರಾರು ಮಂದಿಯನ್ನು ಕರುಣಾಜನಕ ರೀತಿಯಲ್ಲಿ ಚಿತ್ರಹಿಂಸೆ ಕೊಟ್ಟು ಕೊಲ್ಲುವಾಗ ಇಲ್ಲದೇ ಇದ್ದ ಸಾವಿನ ಭಯ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್‌ಗೆ ಈಗ ಹುಟ್ಟಿಕೊಂಡಿದೆ. ಬಾಂಬೆ ಹೈಕೋರ್ಟ್ ಮರಣ ದಂಡನೆ ಶಿಕ್ಷೆಯನ್ನು ಖಚಿತಪಡಿಸಿದ ನಂತರ ಆತ ಮಾತೇ ಆಡುತ್ತಿಲ್ಲವಂತೆ!

2008ರ ಮುಂಬೈ ದಾಳಿ ಸಂಬಂಧ ವಿಶೇಷ ನ್ಯಾಯಾಲಯವು ನೀಡಿದ್ದ ಮರಣ ದಂಡನೆ ತೀರ್ಪನ್ನು ಸೋಮವಾರ ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರ ನಂತರ ಪಾಪಿ ಕಸಬ್ ಜೈಲಿನ ತನ್ನ ಕೊಠಡಿಯಿಂದ ಹೊರಗೆ ಬರುತ್ತಿಲ್ಲ. ಅಲ್ಲದೆ, ಆತನಿಗೆ ರಕ್ಷಣೆ ಒದಗಿಸುತ್ತಿರುವ ಸಿಬ್ಬಂದಿಗಳ ಜತೆಗೂ ಮಾತನಾಡುತ್ತಿಲ್ಲ.
PTI

ವೀಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪನ್ನು ಆಲಿಸಿದ ನಂತರ ತನ್ನ ಕೋಣೆಗೆ ಮರಳಿದ ಕಸಬ್, ಉದ್ವೇಗ ಅಥವಾ ಖಿನ್ನಗೊಂಡವರಂತೆ ಕಂಡು ಬರಲಿಲ್ಲ. ಆದರೆ ಆ ಬಳಿಕ ಆತ ಯಾರ ಜತೆಗೂ ಮಾತಿಗೆ ಇಳಿದಿಲ್ಲ. ರಾತ್ರಿ ಊಟ ಮಾಡಿದ ನಂತರ ಚೆನ್ನಾಗಿ ನಿದ್ದೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.

ಆದರೆ ಎಂದಿನಂತೆ, ತನ್ನ ಧಾರ್ಮಿಕ ದಿನಚರಿಯನ್ನು ಕಸಬ್ ಮುಗಿಸಿದ್ದಾನೆ. ಮಲಗುವ ಮೊದಲು ನಮಾಜ್ ಮಾಡಿದ್ದಾನೆ.

ಅದೇ ದಿನ, ಅಂದರೆ ಬಾಂಬೆ ಹೈಕೋರ್ಟ್ ತೀರ್ಪು ನೀಡಿರುವ ಫೆಬ್ರವರಿ 21ರ ಸೋಮವಾರದಂದು ಮುಂಜಾನೆ ಬೇಗನೆ ಎದ್ದಿದ್ದ ಕಸಬ್ ಎಂದಿಗಿಂತ ಹೆಚ್ಚೇ ದೇವರ ಧ್ಯಾನದಲ್ಲಿ ತೊಡಗಿದ್ದ. ಕುರಾನ್ ಪಠಿಸಿದ್ದ. ಬಳಿಕ ಬಿಳಿ ಕುರ್ತಾ ಧರಿಸಿ, ಗಡ್ಡಧಾರಿಯಾಗಿ ವೀಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳಿ ತೀರ್ಪನ್ನು ಆಲಿಸಿದ್ದ.

ತೀರ್ಪನ್ನು ಆಲಿಸುವ ಹೊತ್ತಿನಲ್ಲಂತೂ ಉದ್ವೇಗಕ್ಕೊಳಗಾಗುವ ಬದಲು ಮುಗುಳ್ನಗುತ್ತಿದ್ದ. ಕೆಲವು ವಕೀಲರ ಪ್ರಕಾರ, ಆತ ಮರಣದಂಡನೆಯನ್ನೇ ಬಯಸಿದ್ದ ಎಂದು ಹೇಳಲಾಗುತ್ತಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಕಸಬ್ ವಕೀಲೆ ಫರ್ಹಾನಾ ಶಾ, ತಾನು ಒಂದೆರಡು ದಿನಗಳಲ್ಲಿ ಜೈಲಿಗೆ ತೆರಳಿ ಕಸಬ್‌ನನ್ನು ಭೇಟಿಯಾಗಲಿದ್ದೇನೆ. ತೀರ್ಪಿನ ವಿವರಗಳನ್ನು ಆತನಿಗೆ ನೀಡಲಿದ್ದೇನೆ. ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ಆತನ ಅಭಿಪ್ರಾಯ ಪಡೆಯುತ್ತೇನೆ ಎಂದಿದ್ದಾರೆ.

ಕಸಬ್‌ನನ್ನು ನಾನು ಗಲ್ಲಿಗೆ ಹಾಕ್ತೇನೆ...
ಕಸಬ್ ಮರಣ ದಂಡನೆಯು ಬಾಂಬೆ ಹೈಕೋರ್ಟಿನಲ್ಲಿ ಖಚಿತವಾಗುತ್ತಿದ್ದಂತೆ, ಮೀರತ್‌ನ 62ರ ಹರೆಯದ ಮಾಮು ಸಿಂಗ್, ಆತನನ್ನು ನೇಣುಗಂಬಕ್ಕೇರಿಸಲು ನಾನು ಸಿದ್ಧ ಎಂದಿದ್ದಾರೆ.

'ಮಾಮು ಜಿಲ್ಲಾಡ್' ಎಂದೇ ಪ್ರಸಿದ್ಧರಾಗಿರುವ ಇವರು ನೇಣಿಗೆ ಹಾಕುವ ಕುಟುಂಬಕ್ಕೆ ಸೇರಿದವರು. ಅವರ ಅಜ್ಜ ರಾಮ್ ರಖಾ ಅವರು ಬ್ರಿಟೀಷ್ ಆಡಳಿತದ ಸಂದರ್ಭದಲ್ಲಿ ಭಗತ್ ಸಿಂಗ್‌ರನ್ನು ಗಲ್ಲಿಗೆ ಹಾಕಿದವರು. ತಂದೆ ಕಲ್ಲು ಸಿಂಗ್ 1981ರಲ್ಲಿ ರಂಗಾ ಮತ್ತು ಬಿಲ್ಲಾನನ್ನು ಗಲ್ಲಿಗೇರಿಸಿದ್ದರು. ಈಗ ಮಗನಿಗೆ ಕಸಬ್‌ನನ್ನು ಫಾಸಿಗೆ ಹಾಕುವ ಬಯಕೆ.

ಮಾಮು ಈವರೆಗೆ 12 ಮಂದಿಯನ್ನು ಗಲ್ಲಿಗೆ ಹಾಕಿದ್ದಾರೆ. ಕಸಬ್‌ನ ಅಂತಿಮ ಕ್ಷಣಗಳ ನಿರ್ಧಾರವೂ ನನ್ನ ಕೈಗೆ ಸಿಕ್ಕರೆ ಸಂತಸ. ಆತನನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೆ ಹಾಕಬೇಕು ಎಂದು ಆಕ್ರೋಶಭರಿತರಾಗಿ ಹೇಳಿಕೊಂಡಿದ್ದಾರೆ.
ಇವನ್ನೂ ಓದಿ