ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 63 ಮಂದಿಗೆ 9 ವರ್ಷ ಜೈಲು, ಈಗ ಖುಲಾಸೆ; ಇದು ನ್ಯಾಯವೇ?
(Godhra train burning case | Maulana Umarji | Gujarat | India)
63 ಮಂದಿಗೆ 9 ವರ್ಷ ಜೈಲು, ಈಗ ಖುಲಾಸೆ; ಇದು ನ್ಯಾಯವೇ?
ಅಹಮದಾಬಾದ್, ಬುಧವಾರ, 23 ಫೆಬ್ರವರಿ 2011( 13:14 IST )
ಒಂದೆರಡು ವರ್ಷವಲ್ಲ, ಕಳೆದ ಒಂಬತ್ತು ವರ್ಷಗಳಿಂದ ಜೈಲೆಂಬ ನರಕದಲ್ಲಿ ನಾವು ಕಾಲ ಕಳೆದಿದ್ದೇವೆ. ಈಗ ನೀವು ನಿರ್ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಾಗಾದರೆ ಕಳೆದು ಹೋದ ನಮ್ಮ ಒಂಬತ್ತು ವರ್ಷಗಳನ್ನು ನಮಗೆ ಯಾರು ನೀಡುತ್ತಾರೆ -- ಇದು ಗೋದ್ರಾ ರೈಲು ದುರಂತ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಬಿಡುಗಡೆಯಾಗಿರುವ 63 ಮಂದಿ ಅಮಾಯಕ ಮುಸ್ಲಿಮರ ಪ್ರಶ್ನೆ.
ನಿನ್ನೆ ಅಹಮದಾಬಾದ್‌ನ ಸಾಬರಮತಿ ವಿಶೇಷ ನ್ಯಾಯಾಲಯವು ಗೋದ್ರಾ ರೈಲು ದುರಂತದ ತೀರ್ಪು ಪ್ರಕಟಿಸಿತ್ತು. ರೈಲಿಗೆ ಬೆಂಕಿ ಬಿದ್ದದ್ದಲ್ಲ, ಬೆಂಕಿ ಹಚ್ಚಿದ್ದು. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದ್ದ ನ್ಯಾಯಾಲಯ, 31 ಮಂದಿಯನ್ನು ದೋಷಿಗಳು ಮತ್ತು 63 ಮಂದಿಯನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿತ್ತು.
ಇದರ ಬೆನ್ನಿಗೆ ಖುಲಾಸೆಗೊಂಡ ಎಲ್ಲಾ 63 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಮಂಗಳವಾರ ಮಧ್ಯರಾತ್ರಿ, ಬುಧವಾರ ಬೆಳಿಗ್ಗೆ ಹೊತ್ತಿಗೆ ಬಹುತೇಕ ಮಂದಿ ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ. ಅವರ ಕುಟಂಬಗಳಲ್ಲೀಗ ಸಂಭ್ರಮದ ಹಬ್ಬದ ವಾತಾವರಣ ಮನೆ ಮಾಡಿದೆ.
'ಕಳೆದ ಒಂಬತ್ತು ವರ್ಷಗಳಿಂದ ನಾನು ನರಕದಲ್ಲಿದ್ದೆ. ಈಗ ನಾನು ಸ್ವರ್ಗದಲ್ಲಿದ್ದೇನೆ. ಇದಕ್ಕಿಂತ ಹೆಚ್ಚು ಏನೂ ಹೇಳಲಾರೆ' ಎನ್ನುತ್ತಾರೆ ಮೊಹಮ್ಮದ್ ಇಸಾಕ್ ಮಂದು. ಆದರೂ ಅವರಲ್ಲಿನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. 'ತಾವು ಅಮಾಯಕರು, ತಪ್ಪು ಮಾಡಿಲ್ಲ ಎನ್ನುವುದಾದರೆ, ನಮ್ಮನ್ನು ಯಾಕೆ ಬಂಧಿಸಲಾಯಿತು? ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಯಾಕೆ ಇಡಲಾಯಿತು?' ಎಂದು ಪ್ರಶ್ನಿಸುತ್ತಾರೆ.
ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿಕೊಂಡಿರುವ ಇನ್ನೊಬ್ಬ ಕಮಲ್ ಬಾದಶಾಹ್ ಅವರಂತೂ ನ್ಯಾಯಾಂಗದ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ನಾನು ಯಾವುದೇ ತಪ್ಪನ್ನು ಮಾಡಿರಲಿಲ್ಲ. ಆದರೂ ನನ್ನ ಮೇಲೆ ಹಲವು ಆರೋಪಗಳನ್ನು ಹೊರಿಸಿ, ಪ್ರಕರಣ ದಾಖಲಿಸಿದರು. ಜೈಲಿಗೆ ಹಾಕಿದರು ಎನ್ನುತ್ತಾರವರು.
ಕೋರ್ಟ್ ತೀರ್ಪಿನಿಂದ ಆನಂದ ತುಂದಿಲರಾಗಿರುವ ಬಹುತೇಕ ಮಂದಿ ಶಬ್ಧಗಳಿಗಾಗಿ ತಡಕಾಡುತ್ತಿದ್ದಾರೆ. ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದೇ ತಿಳಿಯುತ್ತಿಲ್ಲ. ಮಾತು ಮರೆತವರಂತೆ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಕೊನೆಗೂ ನ್ಯಾಯ ಸಿಕ್ಕಿದೆ ಎಂಬ ಸಂತಸದಲ್ಲಿದ್ದಾರೆ.
ಫಾರೂಕ್ ಕೇಸರಿಯವರಿಗೆ ಕೊನೆಗೂ ಸಿಕ್ಕಿದ ನ್ಯಾಯದ ಬಗ್ಗೆ ತೃಪ್ತಿಯಿದೆ. 'ನ್ಯಾಯದ ಹಾದಿ ಸುದೀರ್ಘವಾಗಿತ್ತು, ವಿಳಂಬವಾಯಿತು' ಎಂದಿದ್ದಾರೆ.
ಇಡೀ ದುರಂತದ ಹಿಂದಿನ ಪ್ರಮುಖ ರೂವಾರಿಗಳಲ್ಲಿ ಒಬ್ಬ ಎಂದು ಆರೋಪಿಸಲಾಗಿದ್ದ ಮೌಲಾನಾ ಉಮರ್ಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ಈಗ ನಾನು ಯಾವುದೇ ಹೇಳಿಕೆ ನೀಡಲಾರೆ' ಎಂದಿದ್ದಾರೆ.