ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಸ್ತೆಯಲ್ಲಿ ಒದ್ದಾಡುತ್ತಿದ್ದವನನ್ನು ಆಸ್ಪತ್ರೆಗೆ ಸೇರಿಸಿದ ರಾಹುಲ್ (Rahul Gandhi | Congress | India | Accident)
ಅಪಘಾತ ಸಂಭವಿಸಿ ಯಾರಾದರೂ ಒದ್ದಾಡುತ್ತಿದ್ದರೆ, ನಮಗ್ಯಾಕೆ ಉಸಾಬರಿ ಎಂದು ದೂರ ಸರಿಯುವ ಕಾಲವಿದು. ಅಂತಹ ಹೊತ್ತಿನಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಪ್ರತಿಯೊಬ್ಬರೂ ಅನುಸರಿಸಬೇಕಾದ ಮಾರ್ಗವನ್ನು ಹಾಕಿ ಕೊಟ್ಟಿದ್ದಾರೆ. ರಸ್ತೆ ಅಪಘಾತವೊಂದರಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉಪಚರಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾದರಿಯಾಗಿದ್ದಾರೆ, ಮಾನವೀಯತೆ ಮೆರೆದಿದ್ದಾರೆ.

ಇದು ನಡೆದಿರುವುದು ಮಂಗಳವಾರ ಸಂಜೆ, ನವದೆಹಲಿಯಲ್ಲಿ. ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸದ ಸಮೀಪವೇ, ಅಂದರೆ ಕೃಷ್ಣ ಮೆನನ್ ಮಾರ್ಗದಲ್ಲಿ. ಬೈಕ್ ಸವಾರನೊಬ್ಬನಿಗೆ ಕಾರೊಂದು ಗುದ್ದಿ ಪರಾರಿಯಾಗಿತ್ತು. ಬೈಕಿನಿಂದ ಕೆಳಗೆ ಬಿದ್ದಿದ್ದ ಸವಾರ ಮಾರ್ಗದಲ್ಲಿ ಬಿದ್ದು ಒದ್ದಾಡುತ್ತಿದ್ದ.
PTI

ತನ್ನ ಬೆಂಗಾವಲು ಪಡೆಯೊಂದಿಗೆ ರಾಹುಲ್ ಗಾಂಧಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿತ್ತು. ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ನೋಡಿದ ರಾಹುಲ್ ತನ್ನ ಕಾರನ್ನು ನಿಲ್ಲಿಸಿ, ಕೆಳಗಿಳಿದು ಹೋಗಿ ಉಪಚರಿಸಿದರು. ನಂತರ ಗಾಯಾಳುವನ್ನು ತನ್ನ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಂತೆ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಈ ರೀತಿ ಗಾಯಗೊಂಡು, ರಾಹುಲ್ ಗಾಂಧಿಯಿಂದ ಉಪಚರಿಸಿಕೊಂಡು ನಂತರ ಅವರದೇ ಬೆಂಗಾವಲು ಪಡೆಯಿಂದ ಆಸ್ಪತ್ರೆಗೆ ಸೇರಲ್ಪಟ್ಟ ವ್ಯಕ್ತಿ ಕಲೇರಾಮ್. ಈತ ದೆಹಲಿಯ ದಕ್ಷಿಣಪುರಿ ನಿವಾಸಿ. ದೆಹಲಿ ಮಹಾನಗರ ಪಾಲಿಕೆ ನೌಕರನಾಗಿರುವ ಆತ ಕಚೇರಿಗೆ ತೆರಳುತ್ತಿದ್ದಾಗ, ಇನೋವಾ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿತ್ತು.

ವಾಸ್ತವದಲ್ಲಿ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಕಲೇರಾಮ್ ಬಳಿಗೆ ರಾಹುಲ್ ಗಾಂಧಿ ಹೋಗುವ ಮೊದಲೇ ಜನೇಶ್ ಬಡಿಯಾ ಎಂಬಾತ ಹೋಗಿ ಉಪಚಾರ ಮಾಡಿದ್ದ. ಆದರೆ ಇತರ ಯಾರೊಬ್ಬರೂ ಹತ್ತಿರಕ್ಕೆ ಹೋಗಿರಲಿಲ್ಲ. ಅದೇ ಹೊತ್ತಿಗೆ ದಾರಿಯಲ್ಲಿ ಬಂದ ರಾಹುಲ್ ಗಾಂಧಿ ಮಾನವೀಯತೆ ಮೆರೆದಿದರು.

ಕಲೇರಾಮ್‌ನನ್ನು ಬೆಂಗಾವಲು ಪಡೆಯ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ ಬಳಿಕ, ಸ್ಥಳದಿಂದ ನಿರ್ಗಮಿಸುವ ಮೊದಲು ಜನೇಶ್ ಜತೆ ರಾಹುಲ್ ಗಾಂಧಿ ಮಾತನಾಡಿದರು. ಕಲೇರಾಮ್‌ನ ಬೈಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನೋಡಿಕೊಳ್ಳುವಂತೆ ಹೇಳಿದರು ಎಂದು ಮೂಲಗಳು ಹೇಳಿವೆ.

ಇಂತಹ ಮಾನವೀಯತೆ ಗುಣ ಮತ್ತು ಸರಳತೆಯ ಕಾರಣದಿಂದ ತಾನೇ ರಾಹುಲ್ ಗಾಂಧಿ ಬಹುತೇಕ ಮಂದಿಗೆ ಇಷ್ಟವಾಗಿರೋದು?
ಇವನ್ನೂ ಓದಿ