ಕರ್ನಾಟಕ ಮುಖ್ಯಮಂತ್ರಿ 'ದುರ್ಯೋಧನ' ಇದ್ದಂತೆ. ಅವರಿಂದಾಗಿ ಇಡೀ ರಾಜ್ಯವೇ ಹಾಳಾಗುತ್ತಿದೆ ಎಂದು ಸಂಸತ್ತಿನಲ್ಲಿ ಗಂಭೀರ ಆರೋಪ ಮಾಡಿದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ವಿರುದ್ಧ ಬಿಜೆಪಿ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ ಇಂತಹ ಮುಖ್ಯಮಂತ್ರಿಯನ್ನು ಯಾವತ್ತೂ ಕಂಡಿಲ್ಲ. ಇದು ರಾಜ್ಯದ ಅತ್ಯಂತ ಕೆಟ್ಟ ಸರಕಾರ ಎಂದರು.
ಯಡಿಯೂರಪ್ಪ ಅವರನ್ನು ದುರ್ಯೋಧನನಿಗೆ ಹೋಲಿಸಿದ ಗೌಡರು, 'ದುರ್ಯೋಧನನಿಂದಾಗಿ ಕುರುವಂಶ ಹಾಳಾಯ್ತು. ಯಡಿಯೂರಪ್ಪ ಅವರಿಂದಾಗಿ ರಾಜ್ಯವೇ ಹಾಳಾಗ್ತಿದೆ' ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಪ್ರತಿದಿನ ಸವಾಲುಗಳನ್ನು ಹಾಕುತ್ತಿದ್ದಾರೆ. ನಮ್ಮ ವಿರುದ್ಧ ತನಿಖೆ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಯಾವ ತನಿಖೆ ಬೇಕಾದರೂ ನಡೆಸಲಿ, ನಾನು ಮತ್ತು ನನ್ನ ಮಗ ಕುಮಾರಸ್ವಾಮಿ ಸಿದ್ಧರಿದ್ದೇವೆ. ಆರೋಪಗಳು ಸಾಬೀತಾದರೆ ಜೈಲಿಗೆ ಹೋಗಲು ನಾವು ತಯಾರಿದ್ದೇವೆ ಎಂದರು.
ನಾನು ಮತ್ತು ನನ್ನ ಮಗ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ ಎಸಗಿದ್ದೇವೆ ಎಂದು ಆರೋಪ ಮಾಡಲಾಗುತ್ತಿದೆ. ಎಸ್.ಎಂ. ಕೃಷ್ಣರ ಮೇಲೂ ಆರೋಪಗಳಿವೆ. ಹಾಗಾಗಿ ಈ ಕುರಿತು ತನಿಖೆ ನಡೆಸುವಂತೆ ನಾನು ಪ್ರಧಾನಿಯವರನ್ನು ಮನವಿ ಮಾಡುತ್ತಿದ್ದೇನೆ ಎಂದ ಗೌಡರು, ನಾವು ಇಡೀ ಕುಟುಂಬ, ಸಿಬಿಐ ಸೇರಿದಂತೆ ಯಾವುದೇ ತನಿಖೆಗೂ ಸಿದ್ಧ. ಬಿಜೆಪಿ ಮತ್ತು ಯಡಿಯೂರಪ್ಪ ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಆರೋಪಗಳು ಬಂದ ಹಿನ್ನೆಲೆಯಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜ ವಿರುದ್ಧ ಸಿಬಿಐ, ಸಿವಿಸಿ, ಜೆಪಿಸಿ ವಿಚಾರಣೆ ನಡೆಯುತ್ತಿದೆ. ಆದರೆ ಇನ್ನೊಬ್ಬ ನಾಯಕರು, ತಮ್ಮ ಜಾತಿ ಬಲವನ್ನು ಉಪಯೋಗಿಸಿ, ತಮ್ಮ ಮೇಲಿನ ಎಲ್ಲ ಆರೋಪಗಳಿಂದ ಮುಕ್ತರಾಗಿಸಿಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪರನ್ನು ಜೆಡಿಎಸ್ ವರಿಷ್ಠ ಪರೋಕ್ಷವಾಗಿ ಉಲ್ಲೇಖಿಸಿದರು.
ಗೌಡರ ಹೇಳಿಕೆಗೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿಯವರು ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅವರ ಮಾತಿಗೆ ಅಡ್ಡಿಪಡಿಸಿದರು.