ಪ್ರೇಮ ಸಂಬಂಧ ಹೊಂದಿದ್ದ ಮುಸ್ಲಿಂ ಹುಡುಗಿಯ ಜತೆ ಮಗ ಪರಾರಿಯಾಗಿದ್ದನ್ನೇ ಮುಂದಿಟ್ಟುಕೊಂಡ ಆಕೆಯ ತಂದೆ, ಹುಡುಗನ ತಂದೆಯನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಕರುಣಾಜನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ನಾಮಕ್ಕಲ್ ಜಿಲ್ಲೆಯ ಪೆರಿಯಪಟ್ಟಿ ಗ್ರಾಮದಲ್ಲಿ ಇದು ನಡೆದಿರುವುದು. ಬಲಿಯಾದ ವ್ಯಕ್ತಿಯನ್ನು 61ರ ಹರೆಯದ ನಲ್ಲಯ್ಯನ್ ಎಂದು ಗುರುತಿಸಲಾಗಿದೆ.
ದಲಿತ ಸಮುದಾಯದ ಇವರ ಪುತ್ರ ಶೇಖರ್ (27) ಇತ್ತೀಚೆಗಷ್ಟೇ ತನ್ನ ಪ್ರೇಯಸಿ ಗುಲ್ಜಾರ್ (21) ಜತೆ ಪರಾರಿಯಾಗಿದ್ದ. ಇದೇ ವಿಚಾರದಲ್ಲಿ ವ್ಯವಸ್ಥಿತ ಸಂಚು ರೂಪಿಸಿ ನಲ್ಲಯನ್ ಅವರನ್ನು ಕೊಂದು ಹಾಕಲಾಗಿದೆ. ಕೊಲೆ ಆರೋಪಿಯನ್ನು ಶಹಜಹಾನ್ (52) ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ವಿವಾಹಿತನಾಗಿರುವ ಶೇಖರ್ ತನ್ನ ಪತ್ನಿ ಮತ್ತು ಒಂದು ಮಗುವನ್ನು ಬಿಟ್ಟು ಮುಸ್ಲಿಂ ಹುಡುಗಿಯ ಜತೆ ಪರಾರಿಯಾದ ನಂತರ, ಶಹಜಹಾನ್ ಮತ್ತು ನಲ್ಲಯ್ಯನ್ ಕುಟುಂಬದ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಮಗ ಪರಾರಿಯಾಗಿರುವುದರ ಕುರಿತು ನನಗೇನೂ ಗೊತ್ತಿಲ್ಲ ಎಂದು ನಲ್ಲಯನ್ ಹೇಳಿದರೂ, ಶಹಜಹಾನ್ ಕುಟುಂಬ ನಂಬಿರಲಿಲ್ಲ.
ಇದೇ ವಿಚಾರದಲ್ಲಿ ಭಾನುವಾರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಶಹಜಹಾನ್‌ಗೆ ಇತರ ಮೂವರು ಕೂಡ ಬೆಂಬಲ ನೀಡಿದ್ದರು. ಮೊದಲೇ ಯೋಜನೆ ರೂಪಿಸಿದಂತೆ ನಲ್ಲಯನ್ ಮೇಲೆ ಪೆಟ್ರೋಲ್ ಸುರಿದ ಶಹಜಹಾನ್, ಲೈಟರ್ ಮೂಲಕ ಬೆಂಕಿ ಹಚ್ಚಿದ್ದ ಎಂದು ಮೂಲಗಳು ಹೇಳಿವೆ.
ಇಷ್ಟಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು, ದುರುಳರನ್ನು ಹಿಡಿದು ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದರು.
ದಲಿತ ಪರ ಹೋರಾಟಗಾರ ರವಿ ಎಂಬವರ ಪ್ರಕಾರ, ಶಹಜಹಾನ್ ಮತ್ತು ಆತನ ಕಡೆಯವರು ನಲ್ಲಯ್ಯನ್ ಜಾತಿ ನಿಂದನೆ ಮಾಡುತ್ತಿದ್ದರು. ಅಲ್ಲದೆ, ತನ್ನ ಮಗಳು ಗುಲ್ಜಾರ್ ಮನೆಗೆ ವಾಪಸ್ ಬರದೇ ಇದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದರು.