ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾವೋಗಳನ್ನು ಸೇರಿಕೊಳ್ಳಿ ಎಂದ ಪ್ರಣಬ್‌ಗೆ ಸುಷ್ಮಾ ತರಾಟೆ (2G spectrum scam | Pranab Mukherjee | Sushma Swaraj | UPA govt)
ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆ ಅವ್ಯವಹಾರ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆ ಕುರಿತು ಸಂಸತ್ತಿನಲ್ಲಿ ಗುರುವಾರ ನಿಲುವಳಿಯನ್ನು ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ 'ಮಾವೋವಾದಿಗಳನ್ನು ಸೇರಿಕೊಳ್ಳಿ' ಎಂದು ಪ್ರತಿಪಕ್ಷಗಳನ್ನು ಟೀಕಿಸಿದ್ದ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತೀವ್ರ ತರಾಟೆಗೆ ತೆಗೆದುಕೊಂಡರು.

1998ರಿಂದ 2009ರ ನಡುವೆ ದೂರಸಂಪರ್ಕ ಇಲಾಖೆಯು ಅನುಸರಿಸಿಕೊಂಡು ಬಂದಿರುವ ಎಲ್ಲಾ ನೀತಿಗಳ ಕುರಿತು ತನಿಖೆ ನಡೆಸುವ ವ್ಯಾಪ್ತಿಯನ್ನು 30 ಸದಸ್ಯರ ಜೆಪಿಸಿಗೆ ಒದಗಿಸಲಾಗುವುದನ್ನು ನಿಲುವಳಿಯಲ್ಲಿ ಸೇರಿಸಲಾಗಿದೆ. ವಿತ್ತ ಸಚಿವ ಹಾಗೂ ಲೋಕಸಭೆಯ ನಾಯಕ ಪ್ರಣಬ್ ಮುಖರ್ಜಿಯವರು ನಿಲುವಳಿಯನ್ನು ಮಂಡಿಸಿದರು.

ಈ ಅವಧಿಯಲ್ಲಿ ನಡೆದಿರುವ ತರಂಗಾಂತರ ಹಂಚಿಕೆ, ಪರವಾನಗಿ ಮತ್ತು ತರಂಗಾಂತರಗಳ ಮೇಲಿನ ದರ ನಿಗದಿ ಸಹಿತ ಎಲ್ಲಾ ನೀತಿ-ನಿಯಮಾವಳಿಗಳು ಜೆಪಿಸಿ ತನಿಖೆಗೆ ಒಳಪಡುವಂತೆ ನಿಲುವಳಿಯನ್ನು ಮಂಡಿಸಲಾಯಿತು.

ಈ ಸಮಿತಿಯು ಸಂಸತ್ತಿನ ಮಳೆಗಾಲದ ಅಧಿವೇಶನ ಮುಕ್ತಾಯಕ್ಕೆ ಮೊದಲು ತನ್ನ ವರದಿಯನ್ನು ಸಲ್ಲಿಸಬೇಕು. ದೂರಸಂಪರ್ಕ ಇಲಾಖೆಯಲ್ಲಿ ಮಾಡಬೇಕಾದ ಬದಲಾವಣೆಗಳು, ಸುಧಾರಣೆಗಳು ಮತ್ತು ಪರವಾನಗಿಗಳ ದರ ನಿಗದಿ ಕುರಿತು ಶಿಫಾರಸುಗಳನ್ನು ಈ ಸಮಿತಿ ಮಾಡಲಿದೆ.

ಜೆಪಿಸಿಯಲ್ಲಿ ಲೋಕಸಭೆಯ 20 ಹಾಗೂ ರಾಜ್ಯಸಭೆಯ 10 ಸದಸ್ಯರು ಇರುತ್ತಾರೆ. ಯಾವ ಪಕ್ಷಗಳಿಗೆ ಸೇರಿದವರು ಎಷ್ಟು ಎಂಬುದು ಶೀಘ್ರದಲ್ಲೇ ನಿರ್ಧಾರವಾಗುವ ಸಾಧ್ಯತೆಗಳಿವೆ.

ಜೆಪಿಸಿ ರಚನೆ ಕುರಿತ ಚರ್ಚೆಯ ಸಂದರ್ಭದಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯಿತು. ಜೆಪಿಸಿ ತನಿಖೆಯ ಬೇಡಿಕೆಯನ್ನು ಸುದೀರ್ಘ ಕಾಲದಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನಿರಾಕರಿಸುತ್ತ ಬಂದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಿಲುವಳಿ ಮಂಡಿಸಿದ ನಂತರ ಮಾತನಾಡಿದ ಮುಖರ್ಜಿ, ಸಂಸತ್ ಬಿಕ್ಕಟ್ಟಿನಿಂದ ಸಂಬಂಧಪಟ್ಟ ಪ್ರತಿಯೊಬ್ಬರೂ ಪಾಠಗಳನ್ನು ಕಲಿಯಬೇಕಾಗಿದೆ; ಒಂದು ನಿರ್ದಿಷ್ಟ ಬೇಡಿಕೆಯನ್ನು ಈಡೇರಿಸದ ಹೊರತು ಸಂಸತ್ ಕಲಾಪಕ್ಕೆ ಅವಕಾಶ ನೀಡದೇ ಇರುವ ನಿಲುವುಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.

ಬೇಡಿಕೆಯೊಂದನ್ನು ಅಂಗೀಕರಿಸಲು ಸಂಸತ್ತನ್ನು ಒತ್ತೆಯನ್ನಾಗಿ ಮಾಡಬಾರದು. ಸಂಸದೀಯ ಸಂಸ್ಥೆಗಳ ಮೇಲೆ ಹಗೆತನ ಮತ್ತು ಅಗೌರವಗಳು ಸೃಷ್ಟಿಯಾದಲ್ಲಿ, ಅದು ಸಂವಿಧಾನೇತರ ಸಂಸ್ಥೆಗಳ ವೃದ್ಧಿಗೆ ಕಾರಣವಾಗಬಹುದು ಎಂದು ಪಕ್ಕದ ರಾಷ್ಟ್ರದಲ್ಲಿ 1958ರಲ್ಲಿ ಸೇನಾಡಳಿತ ಹೇರಲ್ಪಟ್ಟ ಪ್ರಸಂಗವನ್ನು ಉಲ್ಲೇಖಿಸಿ ಮುಖರ್ಜಿ ಎಚ್ಚರಿಕೆ ನೀಡಿದರು.

ಅದೇ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಸದನದ ನಾಯಕನಾಗಿ ತನ್ನ ಜವಾಬ್ದಾರಿಯಲ್ಲಿ ವಿಫಲನಾಗಿರುವುದನ್ನು ಸಚಿವರು ಒಪ್ಪಿಕೊಂಡರು. ಆದರೆ ಹಳೆ ವಿಚಾರಗಳನ್ನು ಕೆದಕಿ, ಎನ್‌ಡಿಎ ಸರಕಾರದ ನಿಲುವುಗಳನ್ನು ಪ್ರಸ್ತಾಪಿಸಿದರು. ಟೆಹೆಲ್ಕಾ ಪ್ರಕರಣದಲ್ಲಿ ಜೆಪಿಸಿ ಬೇಕೆಂದು ಪಟ್ಟು ಹಿಡಿದಾಗ ಸಚಿವರಾಗಿದ್ದ ಅರುಣ್ ಜೇಟ್ಲಿ ಅದಕ್ಕೆ ನಿರಾಕರಿಸಿದ್ದರು. ಅಲ್ಲದೆ, ಜೆಪಿಸಿಯಲ್ಲಿನ ಕೆಲವೇ ಸಂಸದರ ಗುಂಪು, ಸದನದಲ್ಲಿ ನಡೆಯುವ ಚರ್ಚೆಗಳಿಗೆ ಪ್ರತಿಯೆನಿಸದು ಎಂದಿದ್ದನ್ನು ಉಲ್ಲೇಖಿಸಿದರು.

ಸಂಸತ್ ಕಲಾಪವನ್ನು ಸುಗಮವಾಗಿ ಸಾಗಲು ಬಿಡದೆ ಇರುವವರು, ಸಂಸತ್ತನ್ನು 'ಹಂದಿಗಳ ಮನೆ' ಎಂದು ಹೇಳುವ ಮಾವೋವಾದಿಗಳನ್ನು ಸೇರಿಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಮುಖರ್ಜಿ ಹೇಳಿರುವುದಕ್ಕೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೋಪಗೊಂಡಾಗ ಯಾವುದು ಸಮಂಜಸ ಮತ್ತು ಯಾವುದು ಅಸಮಂಜಸ ಎಂದು ಗುರುತಿಸಲು ವಿಫಲವಾಗುವ ಅತ್ಯುತ್ತಮ ವ್ಯಕ್ತಿ ಪ್ರಣಬ್ ಮುಖರ್ಜಿ ಎಂದು ಹೇಳುತ್ತಾ, ನಾವು ಜೆಪಿಸಿ ಬೇಕು ಎಂದು ಬೇಡಿಕೆ ಇಟ್ಟಿರುವುದು ಹಿಂಸಾಚಾರವೇ ಅಥವಾ ಅಸಂವಿಧಾನಿಕ ಕೃತ್ಯವೇ ಎಂದು ಅವರಿಂದಲೇ ಸುಷ್ಮಾ ಉತ್ತರ ಬಯಸಿದರು.
ಇವನ್ನೂ ಓದಿ