ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅದ್ಧೂರಿ ಮದುವೆಗಳು, ಅತಿಥಿಗಳ ಕಡಿವಾಣಕ್ಕೆ ಕೇಂದ್ರ ಚಿಂತನೆ (weddings | Indian government | food wastage | lavish marriage)
ಧನಿಕರ ಐಷಾರಾಮಿ ಮದುವೆಗಳಿಗೆ ಕಡಿವಾಣ ಹಾಕುವ ಚಿಂತನೆ ಸರಕಾರಕ್ಕೆ ಕೊನೆಗೂ ಬಂದಿದೆ. ಭಾರೀ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಿ, ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುತ್ತಿರುವುದನ್ನು ತಡೆಯಲು ಹೊಸ ನೀತಿಗಳನ್ನು ರೂಪಿಸುವ ಯೋಚನೆಯಲ್ಲಿ ಕೇಂದ್ರ ತೊಡಗಿದೆ ಎಂದು ವರದಿಗಳು ಹೇಳಿವೆ.

ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸಾವಿರಾರು ಮಂದಿಯನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕರೆಯಿಸಿ ಶ್ರೀಮಂತಿಕೆ ಮೆರೆಸುವುದು ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯ ಎಂಬಷ್ಟರ ಮಟ್ಟಿಗೆ ಬೆಳೆದಿದೆ. ಬಗೆಬಗೆಯ ಭೋಜನಗಳನ್ನು ತಿನ್ನದೇ ಇದ್ದರೂ, ಅಷ್ಟೊಂದು ಇರುವುದೇ ಹೆಚ್ಚುಗಾರಿಕೆ ಎಂಬ ಪರಿಸ್ಥಿತಿ ನೆಲೆಸಿದೆ. ಇದು ಒಪ್ಪೊತ್ತಿನ ಊಟಕ್ಕಿಲ್ಲದ ಮಂದಿಯ ದಿನಚರಿಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆಯಾದ್ದರಿಂದ, ಕಡಿವಾಣ ಹಾಕುವ ಚಿಂತನೆ ಸರಕಾರದ್ದು.

60ರ ದಶಕದಲ್ಲಿನ ಎಕ್ಸಿಕ್ಯೂಟಿವ್ ಗೆಸ್ಟ್ ಕಂಟ್ರೋಲ್ ಆದೇಶವನ್ನು ಮತ್ತೆ ಜಾರಿಗೆ ತರುವ ಸಾಧ್ಯತೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ನೀತಿಯನ್ನು ಜಾರಿಗೆ ತಂದರೆ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗುತ್ತದೆ. ಆ ಮೂಲಕ ಆಹಾರದ ಕೊರತೆಯಾಗುವುದನ್ನು ತಪ್ಪಿಸಲು ಯತ್ನಿಸಲಾಗುತ್ತದೆ ಎಂದು ನವದೆಹಲಿಯಲ್ಲಿನ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಎದುರಾಗಿರುವುದು ಆಹಾರದ ಕೊರತೆಯಲ್ಲ. ಆದರೆ ಭಾರೀ ಪ್ರಮಾಣದ ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಇದು ಹೆಚ್ಚಾಗಿ ನಡೆಯುತ್ತಿರುವುದು ಮದುವೆಗಳಲ್ಲಿ ಎಂದು ಹೆಸರು ಹೇಳಲಿಚ್ಛಿಸದ ಅವರು ವಿವರಣೆ ನೀಡಿದರು.

ಇದು ಸಹಜವಾಗಿಯೇ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ಕೇಂದ್ರ ಸರಕಾರವು ಬೆಲೆಯೇರಿಕೆಯನ್ನು ನಿಯಂತ್ರಿಸುವ ಬದಲು ಏನೇನೋ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.

ಇದೊಂದು ಮೂರ್ಖತನದ, ನಗೆಪಾಟಲಿಗೀಡಾಗುವ ಮತ್ತು ಆಕ್ಷೇಪಣೀಯ ಪ್ರಸ್ತಾವನೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಅವರ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಶೇ.15ರಷ್ಟು ತರಕಾರಿ ಮತ್ತು ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿವೆ.

ಹಿಂದೆಂದೂ ಕಂಡಿರದಂತೆ ಮದುವೆ-ಮುಂಜಿಗಳನ್ನು ನಡೆಸುವುದನ್ನು, ಯಾರನ್ನೋ ಮೆಚ್ಚಿಸಲು ಅದ್ಧೂರಿಯಾಗಿ ತರಹೇವಾರಿ ಖಾದ್ಯಗಳನ್ನು ತಯಾರಿ ಮಾಡುವವರನ್ನು ನಿಯಂತ್ರಿಸಿದಲ್ಲಿ ಈ ದೇಶದ ಬಡವರು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಕಷ್ಟಪಡುವವರಿಗೆ ಆಹಾರ ಪದಾರ್ಥಗಳು ಸುಲಭವಾಗಿ ಸಿಗುವಂತೆ ಮಾಡಬಹುದು ಎಂದು ನಾವು ನಂಬಿದ್ದೇವೆ ಎಂದು ಥಾಮಸ್ ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇವನ್ನೂ ಓದಿ