ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಾಂತರಿ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರಿಸಿ: ಕರುಣಾನಿಧಿ
(convert Christians | Scheduled Castes | Tamil Nadu | M Karunanidhi)
ಇತರ ಧರ್ಮಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಒತ್ತಾಯಿಸಿದ್ದು, 15 ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ವಿಚಾರದಲ್ಲಿ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ತಾನು 1996ರಲ್ಲಿ ಮೊದಲ ಬಾರಿ, ನಂತರ 2006ರಲ್ಲಿ ಎರಡನೇ ಬಾರಿ ಹಾಗೂ ಕಳೆದ ವರ್ಷ ಮೂರನೇ ಬಾರಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಮತಾಂತರಗೊಂಡು ಕ್ರೈಸ್ತ ಧರ್ಮಕ್ಕೆ ಸೇರಿದವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದೇನೆ ಎಂದರು.
ಇದೀಗ ಮತ್ತೆ ಬರೆದಿರುವ ಪತ್ರವನ್ನು ಕರುಣಾನಿಧಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದೇ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಡಿಎಂಕೆ ಈ ರೀತಿಯ ರಾಜಕೀಯ ಮಾಡುತ್ತಿದೆ ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ.
ಹಿಂದೂ ಧರ್ಮವನ್ನು ಹೊರತುಪಡಿಸಿದ ಧರ್ಮದವರನ್ನು ಪರಿಶಿಷ್ಟ ಜಾತಿ ಅಡಿಯಲ್ಲಿ ಪರಿಗಣಿಸುವಂತಿಲ್ಲ ಎಂಬ ಸಂವಿಧಾನದಲ್ಲಿನ ಪರಿಶಿಷ್ಟ ಜಾತಿಗಳ ಕುರಿತ ಮೂರನೇ ಪ್ಯಾರಾದಲ್ಲಿರುವ 1950ರ ಮೂಲ ವಿಧಿಗೆ, ಆನಂತರ ಸಿಖ್ ಮತ್ತು ಬೌದ್ಧ ಧರ್ಮೀಯರನ್ನೂ ಸೇರಿಸಿಕೊಳ್ಳಲು ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿತ್ತೆಂಬುದನ್ನು ಕರುಣಾನಿಧಿ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಾವು ಪಾಲಿಸುತ್ತಿರುವ ಧರ್ಮಗಳ ಹೊರತಾಗಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳ ಜನತೆ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳಿಂದ ಬಳಲುತ್ತಿದ್ದಾರೆ ಎನ್ನುವುದು ತಮಿಳುನಾಡು ಸರಕಾರದ ಅನಿಸಿಕೆ. ಹಾಗಾಗಿ ಸಂವಿಧಾನದಲ್ಲಿನ ಪರಿಶಿಷ್ಟ ಜಾತಿಗಳ 1950ರ ವಿಧಿಯ ಮೂರನೇ ಪ್ಯಾರಾವನ್ನು ಸಂಪೂರ್ಣವಾಗಿ ಅಳಿಸುವುದು ಸೂಕ್ತ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಪ್ರಧಾನಿಯವರು ವೈಯಕ್ತಿಕ ಆಸಕ್ತಿ ತೋರಿಸಿ, ಮಧ್ಯ ಪ್ರವೇಶಿಸಬೇಕು. ಕ್ರೈಸ್ತ ಧರ್ಮಕ್ಕೆ ಹಿಂದೂ ಸೇರಿದಂತೆ ಯಾವುದೇ ಧರ್ಮದಿಂದ ಸೇರಿರಲಿ, ಅವರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಬೇಕು. ಆ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಕರುಣಾನಿಧಿ ಒತ್ತಾಯಿಸಿದ್ದಾರೆ.