ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ನಾಯಕನ ಹತ್ಯೆ; ಸಾಧ್ವಿ ಪ್ರಜ್ಞಾ ಸಿಂಗ್ ಬಂಧನ
(Sadhvi Pragya Singh Thakur | 2008 Malegaon blast case | Sunil Joshi | Samjhauta Express)
ಆರೆಸ್ಸೆಸ್ ನಾಯಕನ ಹತ್ಯೆ; ಸಾಧ್ವಿ ಪ್ರಜ್ಞಾ ಸಿಂಗ್ ಬಂಧನ
ಮುಂಬೈ, ಶನಿವಾರ, 26 ಫೆಬ್ರವರಿ 2011( 18:14 IST )
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಸುನಿಲ್ ಜೋಷಿ ಹತ್ಯೆ ಪ್ರಕರಣ ಸಂಬಂಧ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಶನಿವಾರ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಸುನಿಲ್ ಜೋಷಿಯವರ ಹತ್ಯೆ 2007ರಲ್ಲಿ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದಿತ್ತು. ಈ ಸಂಬಂಧ ಮಧ್ಯಪ್ರದೇಶ ಪೊಲೀಸರು ಮುಂಬೈ ವಿಶೇಷ ಮೋಕಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ ನಂತರ, ಸಾಧ್ವಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನು ಸರಕಾರಿ ವಿಶೇಷ ನ್ಯಾಯವಾದಿ ರೋಹಿನಿ ಸಾಲ್ಯಾನ್ ಖಚಿತಪಡಿಸಿದ್ದಾರೆ.
2008ರ ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಗೆ ನಿನ್ನೆ ತೆರಳಿದ ಮಧ್ಯಪ್ರದೇಶ ಪೊಲೀಸರು, ಬಂಧಿಸಿದ್ದಾರೆ.
ಇದು ಔಪಚಾರಿಕ ಬಂಧನವಷ್ಟೇ. ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಗಳು ಸಿದ್ಧವಾದ ನಂತರ ಮಧ್ಯಪ್ರದೇಶ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ ಎಂದು ಪ್ರಜ್ಞಾ ಸಿಂಗ್ ವಕೀಲ ಗಣೇಶ್ ಸೋವಾನಿ ತಿಳಿಸಿದ್ದಾರೆ.
ದೆಹಲಿಯಿಂದ ಲಾಹೋರಿಗೆ ತೆರಳುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ 18-02-2007ರಂದು ದೆಹಲಿಯಿಂದ ಉತ್ತರಕ್ಕೆ 80 ಕಿಲೋ ಮೀಟರ್ ದೂರದಲ್ಲಿರುವ ಪಾಣಿಪತ್ ಸಮೀಪದ ದಿವಾನಾ ಎಂಬಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಎರಡು ಬೋಗಿಗಳಿಗೆ ಇದರಿಂದ ಹಾನಿಯಾಗಿ, 68 ಮಂದಿ ಅಸುನೀಗಿದ್ದರು. ಇದರ ಶಂಕಿತ ಆರೋಪಿ ಜೋಷಿಯವರನ್ನು 29-12-2007ರಂದು ದೇವಾಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಹಿಂದೂ ಬಲಪಂಥೀಯ ಸಂಘಟನೆ ಅಭಿನವ್ ಭಾರತ್ ಸದಸ್ಯೆ ಎಂದು ಆರೋಪಿಸಲಾಗಿರುವ ಪ್ರಜ್ಞಾ ಸಿಂಗ್, ತನ್ನ ಮೇಲಿನ ಮೋಕಾ ಕಾಯ್ದೆ ಹೇರಿಕೆಯನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಮೇಲೆ ಹೇರಲಾಗಿದ್ದ ಮೋಕಾವನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು. ಆದರೆ ಈ ತೀರ್ಪನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿ, ಮೋಕಾ ಹೇರಿಕೆಯನ್ನು ಸಮರ್ಥಿಸಿತ್ತು. ಅದರ ವಿರುದ್ಧ ಈಗ ಸಾಧ್ವಿ ಸುಪ್ರೀಂ ಮೊರೆ ಹೋಗಿದ್ದಾರೆ.
2008ರ ಸೆಪ್ಟೆಂಬರ್ 29ರಂದು ನಾಸಿಕ್ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶ ಮಾಲೆಗಾಂವ್ ಪಟ್ಟಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಬಲಿಯಾಗಿ, ಹಲವರು ಗಾಯಗೊಂಡಿದ್ದರು. ಈ ಸಂಬಂಧ ಸಾಧ್ವಿ ಸೇರಿದಂತೆ ಒಟ್ಟು 12 ಮಂದಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.