ಹುಷಾರ್... ಭಾರತದಲ್ಲಿ ಪಾಕ್‌ನ 29 ಉಗ್ರರು-ಎಲ್ಲೆಡೆ ಕಟ್ಟೆಚ್ಚರ
ಬೆಂಗಳೂರು, ಭಾನುವಾರ, 27 ಫೆಬ್ರವರಿ 2011( 17:21 IST )
PTI
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಸ್ಥಳಗಳ ಮೇಲೆ ಪಾಕ್ ಉಗ್ರರು ದಾಳಿ ನಡೆಸುವ ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗುಪ್ತದಳ ಭಾನುವಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಪಾಕಿಸ್ತಾನದಿಂದ 29 ಮಂದಿ ಉಗ್ರರು ಈಗಾಗಲೇ ಭಾರತದ ಗಡಿಯೊಳಗೆ ನುಗ್ಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯಗಳಿಗೆ ತೀವ್ರ ಕಟ್ಟೆಚ್ಚರ ವಹಿಸಲು ಈ ಸೂಚನೆ ನೀಡಿದೆ.
ವಿಶ್ವಕಪ್ ಪಂದ್ಯಾವಳಿಗಳು ನಡೆಯುತ್ತಿರುವ ರಾಜ್ಯಗಳಲ್ಲಿ ತೀವ್ರ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗುಪ್ತ ನಿರ್ದೇಶನ ನೀಡಿದ್ದು, ಅದರ ಪ್ರಕಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಬಿ ಗುಂಪಿನ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಉದ್ಯಾನನಗರಿಯಲ್ಲಿ 3 ಸಾವಿರ ಪೊಲೀಸರು: ನಗರದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಬಿ ಗುಂಪಿನ ಪಂದ್ಯಕ್ಕೆ ಮೂರು ಸಾವಿರ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ರಮೇಶ್ ಅವರು ತಿಳಿಸಿದ್ದಾರೆ.
ಮೂರು ಮಂದಿ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್, ಎಸ್ಐ ಹಾಗೂ ಇತರೆ ಸಿಬ್ಬಂದಿಗಳು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ನೇಮಕ ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಪಿ, ಸಿ.ಎ.ಆರ್.ತುಕಡಿಗಳು ಕರ್ತವ್ಯದಲ್ಲಿದ್ದು, ಬಾಂಬ್ ನಿಷ್ಕ್ರಿಯದಳ, ಶ್ವಾನದಳ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಪೊಲೀಸು ಕರ್ತವ್ಯದಲ್ಲಿದ್ದಾರೆಂದು ಅವರು ಹೇಳಿದ್ದಾರೆ.