ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುಪ್ಪಟ್ಟು ವೇತನ; ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ (Anganwadi workers | Pranab Mukherjee | Anganwadi helpers | Budget 2011-12)
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಬಜೆಟ್‌ನಲ್ಲಿ ಅಂಗನಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಿದ್ದರು. ಈಗ ಕೇಂದ್ರ ಸರಕಾರವೂ ಅದೇ ಹಾದಿ ತುಳಿದಿದೆ. ಆ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಂಪರ್ ಹೊಡೆದಿದ್ದಾರೆ.

ಇಂದು ಲೋಕಸಭೆಯಲ್ಲಿ ಆರ್ಥಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು, ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನವನ್ನು 1,500ಯಿಂದ 3,000 ರೂಪಾಯಿಗಳಿಗೆ ಹಾಗೂ ಅಂಗನವಾಡಿ ಸಹಾಯಕಿಯರ ವೇತನವನ್ನು 750 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು ಎಂದರು.

ಇದು 2011ರ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಇದರ ಲಾಭವನ್ನು ದೇಶದಾದ್ಯಂತದ 22 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಡೆದುಕೊಳ್ಳಲಿದ್ದಾರೆ ಎಂದು ಮುಖರ್ಜಿ ತಿಳಿಸಿದರು.

ರಾಜ್ಯ ಸರಕಾರವೂ ಏರಿಕೆ ಮಾಡಿತ್ತು...
ಗುರುವಾರ ರಾಜ್ಯ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 2,500 ರೂಪಾಯಿಗಳಿಂದ 3,000 ರೂಪಾಯಿಗಳಿಗೆ ಹಾಗೂ ಸಹಾಯಕಿಯರ ವೇತನವನ್ನು 1,250 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಏರಿಕೆ ಮಾಡಿದ್ದರು.

ಕೇಂದ್ರ ಸರಕಾರ ನೀಡುವ ಮೊತ್ತಕ್ಕೆ ರಾಜ್ಯವು ತನ್ನ ಪಾಲನ್ನು ಸೇರಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರಕಾರ ವೇತನ ನೀಡುವುದಾದರೆ, ಈ ನೌಕರರ ವೇತನವು ಕೆಳಗಿನಂತೆ ಇರುತ್ತದೆ.

ಕೇಂದ್ರ ಸರಕಾರವೇ ಅಂಗನವಾಡಿ ಕಾರ್ಯಕರ್ತೆಯರಿಗೆ 3,000 ರೂಪಾಯಿ ವೇತನ ನೀಡಲಿರುವುದರಿಂದ, ರಾಜ್ಯದ ಪ್ರಮಾಣವೂ ಸೇರಿದಾಗ ಬಹುತೇಕ 4,500 ಸಾವಿರ ರೂಪಾಯಿಗಳಾಗುತ್ತವೆ. ಅದೇ ರೀತಿ ಸಹಾಯಕಿಯರು ಕೇಂದ್ರ ಸರಕಾರದ 1,500 ಸಾವಿರ ಹಾಗೂ ರಾಜ್ಯದ 750 ರೂಪಾಯಿಗಳು, ಅಂದರೆ 2,250 ರೂಪಾಯಿಗಳನ್ನು ಪಡೆಯಬಹುದು.

ಕೇಂದ್ರದ ಅನುದಾನವನ್ನು ರಾಜ್ಯ ಸರಕಾರವು ಪರಿಷ್ಕರಣೆ ಮಾಡಿ ನೀಡುವುದರಿಂದ, ಈ ಮೊತ್ತ ಅಂಗನವಾಡಿ ನೌಕರರಿಗೆ ಸಿಗುವ ಬಗ್ಗೆ ಖಚಿತತೆಯಿಲ್ಲ. ರಾಜ್ಯ ಸರಕಾರವು ಕೇಂದ್ರ ಅನುದಾನವನ್ನು ಬಳಸಿಕೊಂಡು, ಇಂತಿಷ್ಟು ವೇತನ ಎಂದು ನೀಡುವ ಸಾಧ್ಯತೆಗಳೂ ಇರುತ್ತವೆ. ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಅಲಭ್ಯ.
ಇವನ್ನೂ ಓದಿ